ಸಂಚಾರ ದಟ್ಟಣೆಯಿಂದ 4 ನಗರಗಳಲ್ಲಿ ವರ್ಷಕ್ಕೆ 1.5 ಲಕ್ಷ ಕೋಟಿ ರೂ. ನಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

Traffic--01

ನವದೆಹಲಿ, ಏ.26-ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತಾ ಮಹಾನಗರಗಳಲ್ಲಿ ಸಂಚಾರ ಒತ್ತಡದ ವೇಳೆ ವಾಹನಗಳ ದಟ್ಟಣೆಯಿಂದ ವರ್ಷಕ್ಕೆ 1.47 ಲಕ್ಷ ಕೋಟಿ ರೂ. ಆರ್ಥಿಕ ವ್ಯಯವಾಗುತ್ತಿದೆ. ರಾಜಧಾನಿ, ವಾಣಿಜ್ಯ ರಾಜಧಾನಿ, ಉದ್ಯಾನನಗರಿ ಮತ್ತು ಪಶ್ಚಿಮ ಬಂಗಾಳ ರಾಜಧಾನಿಗಳಲ್ಲಿ ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 6 ರಿಂದ ರಾತ್ರಿ 8 ಗಂಟೆವರೆಗೆ ಪೀಕ್ ಹವರ್ (ಸಂಚಾರ ದಟ್ಟಣೆ ಅವಧಿ) ವೇಳೆ ನಡೆಸಲಾದ ಅಧ್ಯಯನವನ್ನು ಆಧರಿಸಿ ಜಾಗತಿಕ ಅಧ್ಯಯನ ಸಂಸ್ಥೆ-ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್(ಬಿಸಿಜಿ) ಈ ಮಾಹಿತಿ ನೀಡಿದೆ.

ಸಂಚಾರ ಒತ್ತಡ ಇಲ್ಲದ ವೇಳೆಗೆ ಹೋಲಿಸಿದಲ್ಲಿ ವಾಹನ ಒತ್ತಡ ಇರುವ ಸಮಯದಲ್ಲಿ ನಿಗದಿತ ಸ್ಥಳಕ್ಕೆ ತೆರೆಳಲು ಒಂದೂವರೆ ತಾಸು ತಡವಾಗುತ್ತದೆ ಎಂಬ ಅಂಶವನ್ನು ಅಧ್ಯಯನ ಉಲ್ಲೇಖಿಸಿದೆ.  ನಾಲ್ಕು ಮಹಾನಗರಗಳ ಪೈಕಿ ಕೋಲ್ಕತ್ತಾದಲ್ಲಿ ಅತ್ಯಂತ ವಾಹನ ದಟ್ಟಣೆ ಒತ್ತಡ ಹೆಚ್ಚಾಗಿದೆ. ನಂತರದ ಸ್ಥಾನ ಬೆಂಗಳೂರಿನದ್ದು. ದೆಹಲಿಯಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿದ್ದರೂ, ಉತ್ತಮ ರಸ್ತೆ ಜಾಲದಿಂದಾಗಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು ಬಿಸಿಜಿ ಹೇಳಿದೆ.

ಕಳೆದ ಜನವರಿಯಲ್ಲಿ ಈ ನಾಲ್ಕು ನಗರಗಳಾದ್ಯಂತ ವಾಹನ ದಟ್ಟಣೆ ಬಗ್ಗೆ ಈ ಸಂಸ್ಥೆ ಅಧ್ಯಯನ ನಡೆಸಿದೆ.  ದೆಹಲಿಯಲ್ಲಿ ಶೇ.45 ಮಂದಿ ಖಾಸಗಿ ಕಾರುಗಳನ್ನು ಬಳಸುತ್ತಾರೆ. ಬೆಂಗಳೂರಿನಲ್ಲಿ ಇದರ ಪ್ರಮಾಣ ಶೇ.38ರಷ್ಟು. ಮುಂಬೈನಲ್ಲಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಜನರು ಉಪಯೋಗಿಸುತ್ತಾರೆ. ನಂತರದ ಸ್ಥಾನದಲ್ಲಿ ಕೋಲ್ಕತಾ ಮತ್ತು ಬೆಂಗಳೂರು ಇದೆ ಎಂದು ಸಂಸ್ಥೆ ಅಂಕಿ-ಅಂಶ ನೀಡಿದೆ.

Facebook Comments

Sri Raghav

Admin