ಜಮೀರ್ ಬೆಂಬಲಕ್ಕೆ ನಿಂತ ಜೆಡಿಎಸ್’ನ ಇಮ್ರಾನ್ ಪಾಷ

ಈ ಸುದ್ದಿಯನ್ನು ಶೇರ್ ಮಾಡಿ

jameer-Ahmad----01
ಬೆಂಗಳೂರು,ಏ.27-ಬಿಬಿಎಂಪಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿಸಮಿತಿ ಅಧ್ಯಕ್ಷ ಹಾಗೂ ಜೆಡಿಎಸ್ ಸದಸ್ಯ ಇಮ್ರಾನ್ ಪಾಷ ಅವರು ಈ ಬಾರಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಮೀರ ಅಹಮ್ಮದ್ ಖಾನ್ ಅವರಿಗೆ ಬಾಹ್ಯ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ. ಚಾಮರಾಜಪೇಟೆಯಿಂದ ಪಾಷಾ ಅವರು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಬಿಬಿಎಂಪಿ ಸದಸ್ಯೆಯಾಗಿರುವ ಸೀಮಾ ಅವರ ಪತಿ ಅಲ್ತಾಫ್ ಖಾನ್ ಅವರಿಗೆ ದೇವೇಗೌಡರು ಟಿಕೆಟ್ ನೀಡಿದ್ದರು.

ಅಲ್ತಾಫ್ ಖಾನ್ ಅವರಿಗೆ ಜೆಡಿಎಸ್ ಟಿಕೆಟ್ ದೊರೆತ ನಂತರ ಅವರು ಪ್ರಚಾರ ಕಾರ್ಯಕ್ಕೆ ಇಮ್ರಾನ್ ಪಾಷಾ ಅವರನ್ನು ಬಳಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದರು. ಈ ಬೆಳವಣಿಗೆ ಬೆನ್ನಲ್ಲೆ ಇಮ್ರಾನ್ ಪಾಷಾ ಅವರ ನಿವಾಸಕ್ಕೆ ತೆರಳಿದ್ದ ಜಮೀರ್ ಅಹಮ್ಮದ್ ಖಾನ್ ಅವರು ಈ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದರು.

ಜಮೀರ್ ಅವರ ಮನವಿಗೆ ಸ್ಪಂದಿಸಿರುವ ಇಮ್ರಾನ್ ಪಾಷ ಅವರು ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಮೀರ್ ಅವರನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಸದಸ್ಯೆಯಾಗಿರುವ ಸೀಮಾ ಅವರ ಪತಿಗೆ ಜೆಡಿಎಸ್ ಟಿಕೆಟ್ ನೀಡಿರುವುದರಿಂದ ಸೀಮಾ ಅವರು ಅಲ್ತಾಫ್ ಅವರಿಗೆ ಬಾಹ್ಯ ಬೆಂಬಲ ನೀಡಿದಂತಾಗಿದೆ. ಹೀಗಾಗಿ ನಾನು ಜೆಡಿಎಸ್‍ನಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿಗೆ ಬಾಹ್ಯ ಬೆಂಬಲ ನೀಡಲು ತೀರ್ಮಾನಿಸಿದ್ದೇನೆ ಎಂದು ಇಮ್ರಾನ್ ಈ ಸಂಜೆಗೆ ತಿಳಿಸಿದ್ದಾರೆ.  ನಾನು ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಬಗ್ಗೆ ವಿಶ್ವಾಸ ಹೊಂದಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ತೊರೆಯಲ್ಲ . ಆದರೆ ಈ ಚುನಾವಣೆಯಲ್ಲಿ ಅನಿವಾರ್ಯವಾಗಿ ಕಾಂಗ್ರೆಸ್ ಬೆಂಬಲಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

Facebook Comments

Sri Raghav

Admin