ಆರಂಭದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಟಿಕೆಟ್ ವಂಚಿತರು ಈಗ ಫುಲ್ ಸೈಲೆಂಟ್..!

ಈ ಸುದ್ದಿಯನ್ನು ಶೇರ್ ಮಾಡಿ

Politicians

ಬೆಂಗಳೂರು, ಏ.28-ಆರಂಭದಲ್ಲಿ ಗುಡುಗಿದರು ಪಕ್ಷದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದರು, ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು, ಪಕ್ಷ ಬಿಟ್ಟು ಹೋಗಿ ಸ್ವತಂತ್ರವಾಗಿ ಸ್ಪರ್ಧಿಸಿ ಬುದ್ಧಿ ಕಲಿಸುವ ಮಾತುಗಳನ್ನಾಡಿ ಸಡ್ಡು ಹೊಡೆದರು. ಆಮೇಲೆ ತಣ್ಣಗಾದರು. ಟಿಕೆಟ್ ಆಕಾಂಕ್ಷಿಗಳಾಗಿದ್ದ ಬಹುತೇಕರು ಟಿಕೆಟ್ ಸಿಗದಿದ್ದ ಸಂದರ್ಭದಲ್ಲಿ ಬಂಡಾಯದ ಕಹಳೆ ಮೊಳಗಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಬಂಡಾಯ ಹೆಚ್ಚಾಗಿತ್ತು. ಅಧಿಕೃತವಾಗಿ ಅಭ್ಯರ್ಥಿ ಘೋಷಣೆಯಾದ ಮೇಲೆ ಟಿಕೆಟ್ ವಂಚಿತರು ಹಲವೆಡೆ ನಾಯಕರ ವಿರುದ್ಧ ಹರಿಹಾಯ್ದರು.

ಪಕ್ಷೇತರವಾಗಿ ಸ್ಪರ್ಧಿಸುವ ಮಾತುಗಳನ್ನಾಡಿ ದರು. ತಮ್ಮ ಕೋಪ-ತಾಪಗಳನ್ನು ಪತ್ರಿಕಾಗೋಷ್ಠಿಗಳಲ್ಲಿ ಪ್ರದರ್ಶಿಸಿದರು. ಕೆಲವರು ಪಕ್ಷಾಂತರಗೊಂಡು ಬೇರೆ ಪಕ್ಷಗಳಿಂದ ಸ್ಪರ್ಧಿಸಿದರೆ, ಮತ್ತೆ ಕೆಲವರು ನಾಯಕರ ಮನವೊಲಿಕೆಯಿಂದ ತಣ್ಣಗಾದರು. ಬಿಜೆಪಿ ಪ್ರಥಮ ಪಟ್ಟಿಯಲ್ಲಿ ಟಿಕೆಟ್ ವಂಚಿತ ಎನ್.ಆರ್.ರಮೇಶ್ ಅವರು ಅನಂತ್‍ಕುಮಾರ್, ಅಶೋಕ್ ಮೇಲೆಯೇ ಆರೋಪ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಮಹಾಲಕ್ಷ್ಮಿ ಲೇಔಟ್ ಟಿಕೆಟ್ ವಂಚಿತರಾದ ಎಂ.ನಾಗರಾಜ್, ಎಸ್.ಹರೀಶ್ ಅವರು ಕೂಡ ತಮ್ಮ ಅಸಮಾಧಾನ ಹೊರಹಾಕಿ ಈ ಕ್ಷೇತ್ರದಿಂದ ಟಿಕೆಟ್ ಪಡೆದ ನೆ.ಲ.ನರೇಂದ್ರಬಾಬು ವಿರುದ್ಧ ಹರಿಹಾಯ್ದಿದ್ದರು. ನಾಯಕರ ಮನವೊಲಿಕೆ ನಂತರ ತಣ್ಣಗಾಗಿ ಈಗ ನರೇಂದ್ರಬಾಬು ಪರ ಪ್ರಚಾರಕ್ಕಿಳಿದಿದ್ದಾರೆ. ಗುರಪ್ಪ ನಾಯ್ಡು ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ ಮೇಲೆ ಅವರನ್ನು ಬದಲಿಸಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‍ನ್ನು ಎಂ.ಶ್ರೀನಿವಾಸ್ ಅವರಿಗೆ ನೀಡಲಾಗಿತ್ತು. ಅವರೂ ನಾಯಕರ ಮೇಲೆ ಬೇಸರ ವ್ಯಕ್ತಪಡಿಸಿ ದ್ದರು. ಮನವೊಲಿಕೆ ನಂತರ ತಣ್ಣಗಾದರು.

ನೆಲಮಂಗಲ ಕ್ಷೇತ್ರದಲ್ಲಿ ಟಿಕೆಟ್ ವಂಚಿತ ಮಾಜಿ ಸಚಿವ ಅಂಜನಮೂರ್ತಿ ಪಕ್ಷೇತರವಾಗಿ ಸ್ಪರ್ಧೆಗೆ ಮುಂದಾಗಿದ್ದರು. ಕಾಂಗ್ರೆಸ್ ಪಕ್ಷದ ನಾಯಕರು ಮಾತುಕತೆ ನಡೆಸಿದ ನಂತರ ನಾಮಪತ್ರ ವಾಪಸ್ ಪಡೆದು ಅಧಿಕೃತ ಅಭ್ಯರ್ಥಿ ನಾರಾಯಣಸ್ವಾಮಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ.
ಇನ್ನು ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್ ವಿರುದ್ಧ ಸಿ.ಎಂ.ಧನಂಜಯ್, ಸಿ.ನಂಜಪ್ಪ, ಭದ್ರಾವತಿಯ ಮೊಹಮ್ಮದ್ ಸಾನವುಲ್ಲಾ ಬಂಡಾಯದ ಕಹಳೆ ಮೊಳಗಿಸಿದ್ದರು. ಪಕ್ಷದ ಮುಖಂಡರ ಮಧ್ಯಪ್ರವೇಶದ ನಂತರ ಇವರೆಲ್ಲ ಅಧಿಕೃತ ಅಭ್ಯರ್ಥಿಗೆ ಬೆಂಬಲ ಘೋಷಿಸಿ ಸುಮ್ಮನಾಗಿದ್ದಾರೆ.

ಮಂಡ್ಯದಲ್ಲಿ ಎಚ್.ಬಿ.ರಾಮು ಕಾಂಗ್ರೆಸ್ ಪಕ್ಷದಿಂದ ಟಿಕೆಟ್‍ಗೆ ತೀವ್ರ ಪ್ರಯತ್ನ ನಡೆಸಿದ್ದರು. ಗಣಿಗರವಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಜೆಡಿಎಸ್‍ನಿಂದ ಸಿದ್ದರಾಮೇಗೌಡ ಅವರು ಕೂಡ ಬಂಡಾಯದ ಬಾವುಟವನ್ನು ಕೆಳಗಿಳಿಸಿ ದ್ದಾರೆ. ಕೆ.ಆರ್.ಪೇಟೆ ಬಿ.ಎಲ್.ದೇವರಾಜ್ ಅವರು ತಣ್ಣಗಾಗಿದ್ದಾರೆ. ಶ್ರೀರಂಗಪಟ್ಟಣದ ಕಾಂಗ್ರೆಸ್‍ನ ಪಾಲಳ್ಳಿ ಚಂದ್ರಶೇಖರ್ ಕೂಡ ಬಂಡಾಯದಿಂದ ಹಿಂದೆ ಸರಿದಿದ್ದಾರೆ.

ಚಾಮರಾಜ ಕ್ಷೇತ್ರದಿಂದ ಬಂಡಾಯ ಸಾರಿದ್ದ ಎಸ್.ಜಯಪ್ರಕಾಶ್ ಅವರು ಕೂಡ ಹಿಂದೆ ಸರಿದು ಅಧಿಕೃತ ಅಭ್ಯರ್ಥಿಯ ಬೆಂಬಲಕ್ಕೆ ನಿಂತಿದ್ದಾರೆ. ಮಡಿಕೇರಿ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಕಾಂಗ್ರೆಸ್‍ನಿಂದ ಬಂಡಾಯ ಸಾರಿದ್ದರು. ಮಾತುಕತೆ ಮೂಲಕ ಮನವೊಲಿಕೆ ಫಲ ನೀಡಿದ್ದು, ಅವರು ಹಿಂದೆ ಸರಿದ್ದಾರೆ.

ಚಿತ್ರದುರ್ಗದಲ್ಲಿ ಶ್ರೀ ಶಿವಯಾದವ್ ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿಯಾಗಿದ್ದು, ಅವರು ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಹೊಳಲ್ಕೆರೆ ಯಲ್ಲಿ ಬಿಜೆಪಿ ಶಶಿಶೇಖರ್ ನಾಯಕ್, ಶಿವಮೊಗ್ಗ ಗ್ರಾಮಾಂತರದಲ್ಲಿ ಧೀರರಾಜ ಹೊನ್ನವಿಲೆ, ತರೀಕೆರೆ ದೋರ್‍ನಾಳ್ ಪರಮೇಶ್ವರ್ ಕಾಂಗ್ರೆಸ್‍ನಿಂದ ಬಂಡಾಯ ಸಾರಿದ್ದು, ಬಹುತೇಕ ಇವರೆಲ್ಲ ತಣ್ಣಗಾಗಿ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡಲು ಮುಂದಾಗಿದ್ದಾರೆ. ಇನ್ನೂ ಹಲವರು ಪಕ್ಷೇತರರಾಗಿ ಕಣದಲ್ಲಿ ಉಳಿದ್ದಾರೆ. ಮತ್ತೆ ಕೆಲವರು ಬೇರೆ ಪಕ್ಷಕ್ಕೆ ಸೇರಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ.

Facebook Comments

Sri Raghav

Admin