ಮತದಾರರನ್ನು ಸೆಳೆಯಲು ಅಭ್ಯರ್ಥಿಗಳಿಂದ ಹೈಟೆಕ್ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Mobile--01

ಬೆಂಗಳೂರು, ಏ.28-ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಅಭ್ಯರ್ಥಿಗಳು ಪ್ರಚಾರಕ್ಕೂ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ತೀವ್ರಗೊಳಿಸಿದ್ದಾರೆ. ಈ ಬಾರಿ ಮೈಕಾಸುರನ ಹಾವಳಿ ತಗ್ಗಿದಂತಿದೆ. ಮನೆ ಮನೆ ಪ್ರಚಾರ ಜೋರಾಗಿದೆ. ಫೇಸ್‍ಬುಕ್, ವಾಟ್ಸಾಪ್, ಟ್ವೀಟರ್, ಎಸ್‍ಎಂಎಸ್‍ಗಳ ಮೂಲಕ ಪ್ರಚಾರ ಹೆಚ್ಚಾಗಿ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ತಂಡಗಳನ್ನು ಮಾಡಿಕೊಂಡು ಕರಪತ್ರಗಳನ್ನು ಮತದಾರರ ಮುಂದಿಡುತ್ತಾ ಓಲೈಸುತ್ತಿದ್ದಾರೆ. ಮತ ಯಾಚನೆಯಲ್ಲಿ ತೊಡಗಿದ್ದಾರೆ.

ಆಡಳಿತ ಪಕ್ಷ ಕಾಂಗ್ರೆಸ್ ತಾವು ಮಾಡಿದ ಸಾಧನೆಗಳ ಕಿರುಹೊತ್ತಿಗೆಯನ್ನು ಮನೆ ಮನೆಗೆ ತಲುಪಿಸುತ್ತಾ ಮತ ಯಾಚಿಸುತ್ತಿದ್ದರೆ, ಪ್ರತಿಪಕ್ಷ ಬಿಜೆಪಿ ಪ್ರಧಾನಿ ಮೋದಿ ಸಾಧನೆ, ಆಡಳಿತ ಪಕ್ಷದ ವೈಫಲ್ಯಗಳ ಮೂಲಕ ಮತಯಾಚನೆ ಮಾಡುತ್ತಿದೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತದ ಸಾಧನೆಗಳನ್ನು ಮುಂದಿಟ್ಟು ಜೆಡಿಎಸ್ ಅಭ್ಯರ್ಥಿಗಳು ಮತ ಯಾಚನೆ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ತಡರಾತ್ರಿ ಸಭೆಗಳ ಮೂಲಕ ತಮ್ಮನ್ನು ಬೆಂಬಲಿಸುವಂತೆ ಅಭ್ಯರ್ಥಿಗಳು ಮನವಿ ಮಾಡುತ್ತಿದ್ದಾರೆ. ಜಾತಿ, ಸಮುದಾಯಗಳ ಸಭೆ ನಡೆಸುತ್ತಿದ್ದಾರೆ. ದೇವಾಲಯ, ಮಂದಿರ, ಮಸೀದಿಗಳಲ್ಲಿ ಸಭೆ ನಡೆಸಲಾಗುತ್ತಿದೆ. ನಗರ ಪ್ರದೇಶ, ಪಟ್ಟಣಗಳಲ್ಲಿ ವಿವಿಧ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಅಭ್ಯರ್ಥಿಗಳು ಮನವಿ ಮಾಡುತ್ತಿದ್ದಾರೆ.

ಚುನಾವಣಾ ಆಯೋಗದ ಹದ್ದಿನ ಕಣ್ಣಿನ ನಡುವೆಯೂ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರಿಗೆ ಔತಣಕೂಟ, ಬಾಡೂಟ ವ್ಯವಸ್ಥೆಯನ್ನು ಅಲ್ಲಲ್ಲಿ ಏರ್ಪಡಿಸುತ್ತಿದ್ದಾರೆ. ಪ್ರತಿದಿನ ವಿವಿಧ ತಂಡಗಳಲ್ಲಿ ಮಹಿಳೆಯರು, ಯುವಕರು ಬೆಳಗಿನಿಂದ ಸಂಜೆವರೆಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಕೆಲವರು ದೂರವಾಣಿ ಮೂಲಕ ಮತಯಾಚಿಸುತ್ತಿದ್ದಾರೆ. ಎಲ್ಲರ ದೂರವಾಣಿ ನಂಬರ್ ಪಡೆದು ಪ್ರತಿಯೊಬ್ಬರಿಗೂ ಫೋನ್ ಮಾಡಿ ಮತ ನೀಡಬೇಕೆಂದು ಕೋರುತ್ತಿದ್ದಾರೆ. ದೇವಾಲಯಗಳು, ಕಲ್ಯಾಣಮಂಟಪ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ತೆರಳಿ ಅಲ್ಲಿಯೂ ಕೂಡ ರಾಜಕಾರಣಿಗಳು ಮತ ಯಾಚನೆಯಲ್ಲಿ ತೊಡಗಿರುವುದು ಕಂಡು ಬಂತು.

ಅಭ್ಯರ್ಥಿಗಳ ಪರವಾಗಿ ರಾಜಕೀಯ ನಾಯಕರು ಮತಬೇಟೆಯಲ್ಲಿ ತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದಿನಿಂದ ರಾಜ್ಯಪ್ರವಾಸ ಕೈಗೊಂಡರೆ, ಮುಖ್ಯಮಂತ್ರಿ ಸಿದ್ದರಾಮಯ್ಯ 60 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕುಮಾರಸ್ವಾಮಿ ಅವರು 40 ಕಡೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್‍ಕುಮಾರ್ ಸೇರಿದಂತೆ ಹಲವು ನಾಯಕರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಮಾಡುತ್ತಿದ್ದಾರೆ. ಒಟ್ಟಾರೆ ದಿನೇ ದಿನೇ ಪ್ರಚಾರ ಕಣ ರಂಗೇರುತ್ತಿದೆ. ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಮತದಾರರ ಮನವೊಲಿಸುವ ನಾನಾ ಕರಸತ್ತುಗಳನ್ನು ಮಾಡುತ್ತಿದ್ದಾರೆ.

Facebook Comments

Sri Raghav

Admin