ಕಾರ್ಮಿಕರ ದಿನ : ಸಂಘಟಿತರೊಂದಿಗೆ ಅಸಂಘಟಿತ ಕಾರ್ಮಿಕರ ಒಕ್ಕೂಟ ರಚನೆಯಾಗಲಿ

ಈ ಸುದ್ದಿಯನ್ನು ಶೇರ್ ಮಾಡಿ

working-day

ಪ್ರತಿಯೊಂದು ರಾಷ್ಟ್ರದ ಆರ್ಥಿಕ ಪ್ರಗತಿ ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಶ್ರಮಿಕ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿ ಸಾಧಿಸುತ್ತಿರುತ್ತದೆ. ದೈಹಿಕ ಇಲ್ಲವೆ ಬೌದ್ಧಿಕ ಶ್ರಮವನ್ನು ಮಾರಾಟ ಮಾಡಿ ಹಣ ಗಳಿಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ. ಪ್ರತಿಯೊಂದು ದೇಶದಲ್ಲಿ ದೈಹಿಕ ಇಲ್ಲವೆ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸಿ, ಆದಾಯ ಗಳಿಸಿ ತಮ್ಮ ಬದುಕಿನ ಬಂಡಿಯನ್ನು ಸಾಗಿಸುತ್ತಿರುತ್ತಾರೆ. ಈ ರೀತಿ ಆದಾಯ ಗಳಿಸುವ ವರ್ಗಕ್ಕೆ ಕಾರ್ಮಿಕ ವರ್ಗವೆಂದು ಕರೆಯುತ್ತಿದ್ದು, ಪ್ರತಿಯೊಂದು ದೇಶದಲ್ಲಿ ಶೇ.60 ರಿಂದ ಶೇ.65ರಷ್ಟು ಜನರು ಕಾರ್ಮಿಕ ವರ್ಗದವರು.

ಕೈಗಾರಿಕಾ ಕ್ರಾಂತಿಯ ನಂತರದ ಫಲವಾಗಿ ಸಮಾಜದಲ್ಲಿ ಎರಡು ವರ್ಗಗಳು ಉದಯವಾದವು. ಒಂದು ಬಂಡವಾಳ ಶಾಹಿ ಅಥವಾ ಶ್ರೀಮಂತ ವರ್ಗ ಹಾಗೂ ಇನ್ನೊಂದು ಕಾರ್ಮಿಕ ಅಥವಾ ಬಡ ವರ್ಗ. ಬಂಡವಾಳ ಶಾಹಿಗಳು ಕಾರ್ಮಿಕರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಿದ್ದು, ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ.

working-day-1

ಕಾರ್ಮಿಕ ದಿನ ಆಚರಣೆ ಏಕೆ?
ಬಂಡವಾಳ ಶಾಹಿಗಳು ಅನಿರ್ದಿಷ್ಟ ಅವಧಿ ತನಕ ದುಡಿಸಿಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿದ ಕಾರ್ಮಿಕರು ದಿನದ 8 ಗಂಟೆ ದುಡಿವ ಅವಧಿ ಎಂಬ ಬೇಡಿಕೆ ಮುಂದಿಟ್ಟರು. ದಿನದ 24 ಗಂಟೆಗಳಲ್ಲಿ 8 ಗಂಟೆ ದೈನಂದಿನ ಚಟುವಟಿಕೆಗಳನ್ನು ಪೂರೈಸುವ 8 ಗಂಟೆ ದುಡಿವ ಅವಧಿ ಹಾಗೂ ಇನ್ನುಳಿದ 8 ಗಂಟೆ ವಿಶ್ರಾಂತಿಗಾಗಿ ಮೀಸಲು ಎಂಬ ಲೆಕ್ಕಾಚಾರ ಮುಂದಿಡಲಾಯಿತು.

ಮೇ ಡೇ ಮಹತ್ವ
8 ಗಂಟೆ ದುಡಿವ ಅವಧಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ 1886 ಮೇ 1ರಂದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದರು. ಹೋರಾಟವು ತೀವ್ರ ಸ್ವರೂಪ ಪಡೆದಿದ್ದರಿಂದ ಇದನ್ನು ಹತ್ತಿಕ್ಕುವುದಕ್ಕಾಗಿ ಮೇ 4ರಂದು ಪೊಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಇದರಲ್ಲಿ ನೂರಾರು ಕಾರ್ಮಿಕರು ಸಾವನ್ನಪ್ಪಿದ್ದರು. ಇದನ್ನು ಲೆಕ್ಕಿಸದೆ ಕಾರ್ಮಿಕರು ಹೋರಾಟ ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆ ಕಾರ್ಮಿಕರ ಕೆಲಸದ ಅವಧಿಯನ್ನು ಚಾಲನೆಗೆ ತಂದರು. ಇದರ ನೆನಪಿಗೆ ಮೇ 1ರಂದು ಕಾರ್ಮಿಕರ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತ ಬರಲಾಗುತ್ತಿದೆ.

working-day-4

ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಾಮ್ಯದ ಅಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದಾರೆ. ದೇಶದಲ್ಲಿ ಕೇವಲ ಶೇ.20ರ ವರೆಗೆ ಮಾತ್ರ ಕಂಡು ಬಂದಿದ್ದು, ತಮ್ಮ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದಾರೆ. ಇನ್ನುಳಿದ ಶೇ.85ರಷ್ಟು ಕಾರ್ಮಿಕರು, ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂ ರಹಿತ ಮಹಿಳೆ ಹಾಗೂ ಪುರುಷ ಕಾರ್ಮಿಕರು ನಗರಗಳಲ್ಲಿ ಹೊಟೇಲ್‍ಗಳಲ್ಲಿ ದುಡಿಯುವ ಕಾರ್ಮಿಕರು, ಸಣ್ಣ ಉದ್ದಿಮೆಗಳಲ್ಲಿ ದುಡಿಯುವವರು ಈ ಮುಂತಾದ ಕ್ಷೇತ್ರಗಳಲ್ಲಿ ದುಡಿವ ಕೆಲಸಗಾರರು ಅಸಂಘಟಿತ ಕಾರ್ಮಿಕರು. ಇವರಿಗೆ ಮೂಲತಃ ನಿರ್ದಿಷ್ಟ ಕೂಲಿ ಎಂಬುದೇ ಗಗನ ಕುಸುಮವಾಗಿದ್ದು, ತೀವ್ರತರ ಶೋಷಣೆಗೆ ಒಳಪಟ್ಟಿದ್ದಾರೆ. ಇಂತಹ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಸ್ವಾತಂತ್ರ್ಯಾ ನಂತರ ಕೇಂದ್ರ ಸರ್ಕಾರ 1949ರಲ್ಲಿ ಕನಿಷ್ಠ ಕೂಲಿ ಕಾಯ್ದೆಯನ್ನು ಜÁರಿಗೆ ತಂದಿದ್ದು, ಆ ಕಾಯ್ದೆಯು ಬಹುತೇಕವಾಗಿ ಹಲ್ಲಿಲ್ಲದ ಕಾಯ್ದೆಯಾಗಿದ್ದು, ಪರಿಪೂರ್ಣವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ.

ನಾಲ್ಕು ಕೋಟಿಗೂ ಅಧಿಕ ಸಂಖ್ಯೆಯಲ್ಲಿ ರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ನೀಡುವ ಪ್ರಯತ್ನವಾಗಿ, ಅವರನ್ನು ಅಧಿಕೃತ ವಲಯದ ಉದ್ಯೋಗಿಗಳಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರನ್ನು ಸಮಾಜ ಕಲ್ಯಾಣ ಕಾನೂನುಗಳ ಪರಿಧಿಯೊಳಗೆ ತರಬೇಕು ಹಾಗೂ ಭವಿಷ್ಯ ನಿಧಿ, ಕನಿಷ್ಠ ವೇತನ ಪಾವತಿ, ಹೆರಿಗೆ ರಜೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಅವರನ್ನು ಅಧಿಕೃತ ವಲಯದ ನೌಕರರನ್ನಾಗಿ ಪರಿಗಣಿಸುವಂತೆ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಇಂಥ ಕಾರ್ಮಿಕರಿಗೆ ಸೂಕ್ತ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ವೃದ್ಧಾಪ್ಯ ವೇತನ, ವಿಕಲಚೇತನ ಮಾಸಾಶನ ಹಾಗೂ ಗೌರವಾನಿತ್ವ ಜೀವನ ನಡೆಸಲು ಅಗತ್ಯವಾದ ಇತರ ಫಲಾನುಭವಿಗಳನ್ನು ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವೆಗಳ ಸ್ಥಿತಿ ಸುಧಾರಣೆ) ಕಾಯ್ದೆ, 1996 ಅಧಿನಿಯಮವನ್ನು ಸಂಸತ್ತು ರೂಪಿಸಿದ್ದರೂ ನಿರ್ಮಾಣ ಕಾರ್ಮಿಕರ ದುರಾವಸ್ಥೆ ನಿವಾರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಕೆಲವು ವರ್ಷಗಳಿಂದ 37,400 ಕೋಟಿ ರೂ.ಗಳ ಸುಂಕ ಸಂಗ್ರಹಿಸಲಾಗಿದ್ದು, ಇದರಲ್ಲಿ 9,500 ಕೋಟಿ ರೂ.ಗಳನ್ನು ಮಾತ್ರ ಬಳಸಲಾಗಿದೆ. ಉಳಿದ ಹಣ ಹಾಗೆ ಉಳಿದಿದೆ ಎಂಬ ಸಂಗತಿಯನ್ನೂ ಸಹ ನ್ಯಾಯಾಲಯ ಉಲ್ಲೇಖಿಸಿದೆ.

ಒಟ್ಟಾರೆ ಭಾರತದಲ್ಲಿ ಕಾರ್ಮಿಕರು ಶೋಷಣೆಯಲ್ಲೇ ಬದುಕು ಸಾಗಿಸುತ್ತಿದ್ದು, ಶ್ರೀಮಂತರು ಶ್ರೀಮಂತರಾಗಿಯೇ ಮಂದುವರೆದರೆ ಬಡವರು ಬಡವರಾಗಿಯೇ ಸಾಗುತ್ತಿದ್ದಾರೆ. ಇಂತಹ ಶೋಷಣೆಯ ವಿರುದ್ಧ ಕಾರ್ಮಿಕ ಒಕ್ಕೂಟಗಳಲ್ಲಿ ಐಕ್ಯತೆ ಕಾಪಾಡಿಕೊಂಡು ಹೋರಾಟ ಮಾಡಲು ಸದಾಕಾಲ ಶ್ರಮಿಸುತ್ತಿರಬೇಕು. ಆಗ ಶೋಷಣೆ ನಿಲ್ಲುತ್ತದೆ. ಇದು ಕೇವಲ ಕಾರ್ಮಿಕರ ಐಕ್ಯತೆಯಿಂದ ಮಾತ್ರ ಸಾಧ್ಯ. ಸಂಘಟಿತರೊಂದಿಗೆ ಅಸಂಘಟಿತ ಕಾರ್ಮಿಕರು ಸೇರಿ ಐಕ್ಯತೆಯಿಂದ ಒಕ್ಕೂಟ ರಚಿಸಿ ಆ ಮೂಲಕ ತಮ್ಮ ಬದುಕನ್ನು ಹಸನಾಗಿ ಮಾಡಿಕೊಳ್ಳಲಿ ಎಂಬುದೇ ನಾಗರಿಕ ಸಮಾಜದ ಬಯಕೆ-ಹಾರೈಕೆಯಾಗಿದೆ.

Facebook Comments

Sri Raghav

Admin