ಸಿದ್ದು ವಿರುದ್ಧ ಯಡಿಯೂರಪ್ಪ ವಾಗ್ದಾಳಿ : ಮೋದಿ ಅವರಿಗೆ ಪ್ರಶ್ನೆ ಕೇಳುವ ನೈತಿಕತೆ ಸಿಎಂ ಉಳಿಸಿಕೊಂಡಿದ್ದಾರೆಯೇ?

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--Yadiyurappa-

ಬೆಂಗಳೂರು,ಮೇ1-ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳುವ ನೈತಿಕತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಳಿಸಿಕೊಂಡಿದ್ದಾರೆಯೇ? ಯಾರ್ರೀ ಅದು ಸಿಎಂ..? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.  ಟ್ವಿಟರ್‍ನಲ್ಲಿ ಪಂಚ ಪ್ರಶ್ನೆಗಳನ್ನು ಕೇಳಿರುವುದಕ್ಕೆ ಕೆಂಡಮಂಡಲರಾದ ಯಡಿಯೂರಪ್ಪ, ಸಿದ್ದರಾಮಯ್ಯ ಪ್ರಧಾನಿಗೆ ಪ್ರಶ್ನೆ ಕೇಳುವ ನೈತಿಕತೆ ಉಳಿಸಿಕೊಂಡಿದ್ದರೆ ಅದಕ್ಕೆ ಉತ್ತರ ನಿರೀಕ್ಷಿಸಬಹುದಿತ್ತು. ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಅವರು ಮನಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಎಲ್ಲರ ದಾಖಲೆಗಳನ್ನು ಮುರಿದಿದ್ದಾರೆ. ಇಂಥವರು ವಿಶ್ವವೇ ಮೆಚ್ಚುವಂತಹ ಆಡಳಿತ ನಡೆಸಿರುವ ಪ್ರಧಾನಿಗೆ ಪ್ರಶ್ನೆ ಕೇಳುತ್ತಾರೆ. ಇಂಥವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.  ಬಿಜೆಪಿ ಒಡೆದ ಮನೆಯಾಗಿದೆ ಎಂದು ಅಪ್ರಚಾರ ನಡೆಸಲಾಗುತ್ತಿದೆ. ನೀವು(ಸಿದ್ದರಾಮಯ್ಯ), ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಯಾವಾಗ ಒಗ್ಗಟ್ಟಾಗಿ ಪ್ರಚಾರ ನಡೆಸಿದ್ದೀರಿ.ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದು, ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಮೊದಲು ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯನವರ ನಡವಳಿಕೆಗೆ ಕಾಂಗ್ರೆಸ್ ನಾಯಕರೇ ಬೇಸತ್ತು ಹೋಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸೋತ ಮೇಲೆ ಸಿದ್ದರಾಮಯ್ಯ ಎಲ್ಲಿರುತ್ತಾರೆ ಎಂಬುದನ್ನು ಬ್ಯಾಟರಿ ಹಿಡಿದುಕೊಂಡು ಹುಡುಕಬೇಕು. ಈಗಾಗಲೇ ಒಬ್ಬಂಟಿಯಾಗಿ ಅಲೆದಾಡುತ್ತಿದ್ದೀರಿ. ಫಲಿತಾಂಶದವರೆಗೆ ಕಾಯಿರಿ ಎಂದು ಸೂಚ್ಯವಾಗಿ ಹೇಳಿದರು. ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ಟೀಕಾಪ್ರಹಾರ ನಡೆಸಿದ ಯಡಿಯೂರಪ್ಪ, ಆ ಮನುಷ್ಯ ರಾಜ್ಯಕ್ಕೆ ಬಂದು ಇನ್ನಷ್ಟು ಹುಚ್ಚುಚ್ಚಾಗಿ ಮಾತನಾಡಲಿ. ಅವರು ಎಷ್ಟು ಮಾತನಾಡುತ್ತಾರೊ ಅದು ಬಿಜೆಪಿಗೆ ಲಾಭವಾಗಲಿದೆ.

ರಾಹುಲ್ ಎಲ್ಲೇ ಹೋದರೂ ಪಕ್ಷವನ್ನು ಗೆಲ್ಲಿಸಲು ಸಾಧ್ಯವಿಲ್ಲ. ದೇಶದ ಎಲ್ಲ ಕಡೆ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಕರ್ನಾಟಕದಲ್ಲೂ ಬ್ರಹ್ಮ ಬಂದರೂ ಫಲಿತಾಂಶವನ್ನು ಬದಲಾಯಿಸಲು ಸಾಧ್ಯವಿಲ್ಲ. ಜನರ ನಾಡಿಮಿಡಿತ ಗೊತ್ತಾಗಿಯೇ ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ನಮ್ಮ ನಾಯಕರ ವಿರುದ್ಧ ಮನೆ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಿಎಸ್‍ವೈ ದೂರಿದರು.  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಿಮ್ಮ ಅಪಪ್ರಚಾರಕ್ಕೆ ಮತದಾರರ ಸೊಪ್ಪು ಹಾಕುವುದಿಲ್ಲ. 15ರ ಫಲಿತಾಂಶದವರೆಗೆ ಏನುಬೇಕಾದರೂ ಮಾತನಾಡಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಯಡಿಯೂರಪ್ಪ ಎಚ್ಚರಿಸಿದರು.

Facebook Comments

Sri Raghav

Admin