ಮೋದಿ ಹೇಳಿಕೆಗೆ ವಿಶೇಷ ಅರ್ಥ ಬೇಡ, ಇತರ ರಾಜ್ಯಗಳ ನಾಯಕರ ಬೆಂಬಲದಿಂದ ಜೆಡಿಎಸ್’ಗೆ ಅಧಿಕಾರ : ಹೆಚ್’ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

HDD-Press-club

ಬೆಂಗಳೂರು, ಮೇ 2-ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು. ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ 2018ರ ವಿಧಾನಸಭೆ ಚುನಾವಣೆ ಮಾತು ಮಂಥನದಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹಾಗೂ ಸಂಸದ ಅಸಾಸುದ್ದೀನ್ ಓವೈಸಿ ಈಗಾಗಲೇ ಜೆಡಿಎಸ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲೂ ಒಳ್ಳೆಯ ವಾತಾವರಣ ಇದೆ. ಹೀಗಾಗಿ ಯಾವುದೇ ಪಕ್ಷದೊಂದಿಗೆ ಚುನಾವಣೆ ನಂತರ ಮೈತ್ರಿ ಕೈಗೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ವಾಸ್ತವ ಸ್ಥಿತಿಯನ್ನು ಅರಿತು ಮಾಜಿ ಪ್ರಧಾನಿಗೆ ಗೌರವ ಕೊಡುವುದಾಗಿ ಹೇಳಿದ್ದಾರೆ. ಅದರಲ್ಲಿ ಯಾವುದೇ ಔಚಿತ್ಯವಿಲ್ಲ ಎಂದರು. ತಾವೂ ಕೂಡ ಬದಲಾಗಿಲ್ಲ. ಪ್ರಧಾನಿ ಮೋದಿ ಕೂಡ ಬದಲಾಗಿಲ್ಲ ಎಂದು ಅವರು ಹೇಳಿದರು. ರಾಜ್ಯದ ರೈತನ ಮಗ, ಕನ್ನಡಿಗರಾದ ತಾವು ಪ್ರಧಾನಿಯಾದಾಗ ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಮುಖ್ಯಮಂತ್ರಿಗಳ ನಿವಾಸ ಹಾಗೂ ಕಚೇರಿಯಲ್ಲಿ ತಮ್ಮ ಫೋಟೋ ಹಾಕಿದ್ದರು. ಆನಂತರ ಮುಖ್ಯಮಂತ್ರಿಯಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಯಾರೂ ಸಹ ಆ ಫೋಟೋ ತೆಗೆಸಿರಲಿಲ್ಲ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಕೂಡಲೇ ನನ್ನ ಫೋಟೋವನ್ನು ಹೊರಹಾಕಿದರು ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡಿಗ ಪ್ರಧಾನಿಯಾಗಿದ್ದ ಬಗ್ಗೆ ಗೌರವ ಕೊಡುವ ಸೌಜನ್ಯ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಪ್ರಧಾನಿಯವರು ದೇವೇಗೌಡರು ಬಂದರೆ ಬಾಗಿಲು ತೆರೆಯುವೆ ಎಂದು ಹೇಳಿರುವುದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಪ್ರಧಾನಿ ಅವರು ಒಂದು ರಾಜ್ಯಕ್ಕೆ ಹೋದಾಗ ಹೇಗೆ ಮಾತನಾಡಬೇಕೆಂಬುದನ್ನು ತಿಳಿದುಕೊಂಡಿರುತ್ತಾರೆ. ಕಳೆದ 2 ತಿಂಗಳಿನಿಂದಲೂ ಜೆಡಿಎಸ್ ಹಾಗೂ ತಮ್ಮ ಬಗ್ಗೆ ಮುಖ್ಯಮಂತ್ರಿ ಅವರು ಮಾಡುತ್ತಿರುವ ಟೀಕೆಗಳನ್ನು ಕೂಡ ಗಮನಿಸಿರುತ್ತಾರೆ ಎಂದರು. ಪುತ್ರ ವ್ಯಾಮೋಹದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿಲ್ಲ, ಪ್ರಾದೇಶಿಕ ಪಕ್ಷವನ್ನು ಉಳಿಸುವ ಉದ್ದೇಶದಿಂದ ಬಯಸುತ್ತಿದ್ದೇನೆ ಎಂದ ಅವರು, ಸಿದ್ದರಾಮಯ್ಯ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿರಲಿಲ್ಲವೇ? ಎ.ಕೃಷ್ಣಪ್ಪ, ಮೀರಾಜುದ್ದೀನ್ ಪಟೇಲ್ ಅವರು ಜೆಡಿಎಸ್ ಅಧ್ಯಕ್ಷರಾಗಿರಲಿಲ್ಲವೇ? ಇವೆಲ್ಲ ಪುತ್ರ ವ್ಯಾಮೋಹವೇ ಎಂದು ಪ್ರಶ್ನಿಸಿದ ಅವರು, ಪಕ್ಷ ಉಳಿಸುವ ಹಠವಿದೆ ಎಂದು ದೇವೇಗೌಡರು ಹೇಳಿದರು.

ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡು ಆ ಪಕ್ಷಕ್ಕೆ 20 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 48 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸಾವಿರಕ್ಕಿಂತ ಎರಡೂವರೆ ಸಾವಿರ ಮತಗಳ ಅಂತರದಿಂದ ಸೋತಿದ್ದರು. ಅಂತಹ ಕಡೆಗಳಲ್ಲಿ ಅನುಕೂಲವಾಗಬಹುದೆಂಬ ಉದ್ದೇಶದಿಂದ ಬಿಎಸ್‍ಪಿ ಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಈ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಮುರಿದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ. ರಾಜ್ಯದ ಮುಖ್ಯಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯ, ಗುಂಡೂರಾವ್, ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಬಿ.ಎಸ್.ಯಡಿಯೂರಪ್ಪ ಅವರು ಪ್ರಾದೇಶಿಕ ಪಕ್ಷ ಕಟ್ಟಿದರೂ ಕೂಡ ಸಫಲರಾಗಲಿಲ್ಲ ಎಂದು ಹೇಳಿದರು. ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪ್ರಧಾನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ವಿವಾದ ಬಗೆಹರಿಸುವಂತೆ ಕೋರಿದ್ದರೂ ಕೂಡ ಪ್ರಧಾನಿ ಮಾತನಾಡದಿದ್ದರೆ ಏನು ಮಾಡಲು ಸಾಧ್ಯ ಎಂದರು. ತೆಂಗು ಬೆಳೆಗಾರರಿಗೆ ಕೇರಳ ಮಾದರಿಯಲ್ಲಿ ಪರಿಹಾರ ಒದಗಿಸಬೇಕೆಂಬ ಮನವಿಗೂ ಕೂಡ ಸ್ಪಂದಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಶೆಣೈ, ಪ್ರಧಾನಕಾರ್ಯದರ್ಶಿ ಕಿರಣ್, ಬೆಂಗಳೂರು ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.

Facebook Comments