ವಾಟಾಳ್ ನಾಗರಾಜ್ ಪಕ್ಷದ ಪ್ರಣಾಳಿಕೆ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

vatal-nagaraj
ಬೆಂಗಳೂರು, ಮೇ 2- ಚಾಮರಾಜನಗರದ ಸಮಗ್ರ ಅಭಿವೃದ್ಧಿ, ಬಡವರಿಗೆ 10 ಸಾವಿರ ನಿವೇಶನಗಳ ಹಂಚಿಕೆ, 4 ಸಾವಿರ ಮನೆಗಳ ನಿರ್ಮಾಣ, ಕಾವೇರಿ ಎರಡನೆ ಹಂತದ ಯೋಜನೆ ಜಾರಿ, ಕನ್ನಡ ನಾಡು-ನುಡಿ,  ನೆಲ-ಜಲ-ಸಂಸ್ಕøತಿ ಉಳಿವಿಗಾಗಿ ನಿರಂತರ ಹೋರಾಟ ಸೇರಿದಂತೆ ಹತ್ತು-ಹಲವು ಅಂಶಗಳುಳ್ಳ ಕನ್ನಡ ಚಳವಳಿ ವಾಟಾಳ್ ಪಕ್ಷದ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು.

ಕನ್ನಡ ಹೋರಾಟಗಾರರ ಪರವಾಗಿ 224 ಕ್ಷೇತ್ರಗಳಲ್ಲಿ ಕನ್ನಡ ವಾಟಾಳ್ ಪಕ್ಷದ ವತಿಯಿಂದ, ಚಾಮರಾಜನಗರ ಕ್ಷೇತ್ರದಿಂದ ಏಕೈಕ ಅಭ್ಯರ್ಥಿಯಾಗಿರುವ ವಾಟಾಳ್ ನಾಗರಾಜ್ ಅವರು ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿ, ಕಳೆದ ಐದು ದಶಕಗಳಿಂದ ಕನ್ನಡದ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತ ಬಂದಿದ್ದೇನೆ. ಉಸಿರಿರುವವರೆಗೂ ನನ್ನ ಹೋರಾಟ ಮುಂದುವರಿಸುತ್ತೇನೆ. ಶಾಸನ ಸಭೆಯಲ್ಲಿ ಕನ್ನಡ ಪರವಾಗಿ ದನಿ ಎತ್ತುವ ಒಬ್ಬರೂ ಇಲ್ಲದಂತಾಗಿದೆ. ಅದಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಈ ಹಿಂದೆ ನಾಲ್ಕು ಬಾರಿ ಶಾಸಕನಾಗಿದ್ದೆ. ಈ ಬಾರಿ ಕ್ಷೇತ್ರದ ಜನ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು. ರೈತ ಸಂಘದ ಮುಖಂಡರನ್ನು ಬೆಂಬಲಿಸುವ ರಾಷ್ಟ್ರೀಯ ಪಕ್ಷದವರು ಪ್ರಾಮಾಣಿಕ ಕನ್ನಡ ಹೋರಾಟಗಾರನಾದ ನನ್ನನ್ನು ಬೆಂಬಲಿಸದೆ ನನ್ನ ವಿರುದ್ಧ ಸ್ಪರ್ಧೆಗಿಳಿದಿರುವುದು ವಿಪರ್ಯಾಸ ಎಂದು ಹೇಳಿದರು.

ಆದರೂ ಕ್ಷೇತ್ರದ ಜನ, ಕನ್ನಡಿಗರು ನನ್ನ ಪರವಾಗಿದ್ದಾರೆ. ಈ ಬಾರಿ ನಾನು ಜಯಗಳಿಸಲಿದ್ದೇನೆ. ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಹತ್ತು-ಹಲವು ಯೋಜನೆಗಳ ಪ್ರಣಾಳಿಕೆಯನ್ನು ರೂಪಿಸಲಾಗಿದೆ. ಗಡಿನಾಡು-ಹೊರನಾಡು ಕನ್ನಡಿಗರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇದರ ಜತೆಗೆ ಮಹದಾಯಿ, ಕಳಸಾ-ಬಂಡೂರಿ, ಮೇಕೆದಾಟು, ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗಳಿಗೆ ಒತ್ತು ಕೊಟ್ಟಿದ್ದಾರೆ. ಅಲ್ಲದೆ, ಪ್ರತಿಯೊಬ್ಬರಿಗೂ ಉಚಿತವಾಗಿ ಹೇರ್ ಕಟಿಂಗ್, ಶೇವಿಂಗ್ ಮಾಡಿಸುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದಾರೆ. ಕತ್ತೆಗಳ ಅಭಿವೃದ್ಧಿ ಮಂಡಳಿ, ಪ್ರತಿ ಗ್ರಾಮಗಳಲ್ಲಿ ಜಾನುವಾರುಗಳಿಗಾಗಿ ಆಧುನಿಕ ಕೊಟ್ಟಿಗೆಗಳ ನಿರ್ಮಾಣ, ಬೆಂಗಳೂರು ನಗರದಲ್ಲಿ 1 ಲಕ್ಷ ಶೌಚಾಲಯಗಳ ನಿರ್ಮಾಣ, ಉಚಿತ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡುವ ಉದ್ದೇಶವನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದಿರುವ ಅವರು, ರಾಷ್ಟ್ರೀಯ ಪಕ್ಷಗಳ ಪರ ಪ್ರಚಾರ ಮಾಡುತ್ತಿರುವರು ಕನ್ನಡಿಗರಲಿಲ್ಲ. ರಾಹುಲ್‍ಗಾಂಧಿ, ಅಮಿತ್ ಷಾ, ಮೋದಿ, ಮಾಯಾವತಿ ಇವರಾರಿಗೂ ನಾಡಿನ ಅಸ್ಮಿತೆಯ ಬಗ್ಗೆ ಅರಿವಿಲ್ಲ. ನಾಡು-ನುಡಿ-ಸಂಸ್ಕøತಿ, ನೆಲ-ಜಲದ ಬಗ್ಗೆ ತಿಳುವಳಿಕೆ ಇಲ್ಲ. ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪಗಳ ಬಗ್ಗೆ ಮಾತನಾಡುತ್ತಾರೆ. ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ಹಾವಳಿ ಮಿತಿಮೀರಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳು ಪರಭಾಷಿಗರಿಗೇ ಹೆಚ್ಚಿನ ಮನ್ನಣೆ ನೀಡಿವೆ. ಕನ್ನಡ ಪರ ಹೋರಾಟಗಾರರು ಹೆಚ್ಚು ಹೆಚ್ಚು ಶಾಸನ ಸಭೆಗೆ ಆಯ್ಕೆಯಾಗಿ ಬರಬೇಕು ಎಂಬುದು ನಮ್ಮ ಉದ್ದೇಶ. ನಾನು ಒಬ್ಬಂಟಿಯಾದರೂ ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ವಾಟಾಳ್ ತಿಳಿಸಿದರು.

Facebook Comments

Sri Raghav

Admin