‘ಭೂತಯ್ಯನ ಮೊಮ್ಮಗ ಅಯ್ಯು’ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

bhutayyana-mommoga-1

ಸ್ಯಾಂಡಲ್‍ವುಡ್‍ನಲ್ಲಿ ಈ ವಾರ ಮತ್ತೊಂದು ಸಂಪೂರ್ಣ ಹಾಸ್ಯಭರಿತ ಮನರಂಜನಾ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿತರಕ ವೆಂಕಟ್‍ಗೌಡ ಈ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಪದೇ ಪದೇ, ನಮಕ್‍ಹರಾಮ್ ಚಿತ್ರಗಳನ್ನು ನೀಡಿದ ನಾಗರಾಜ್ ಪೀಣ್ಯ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಾಸ್ಯ ಚಿತ್ರದಲ್ಲಿ ಭೂತಯ್ಯ ಯಾರು ಎಂಬುದು ಇಲ್ಲಿಯವರೆಗೂ ತಿಳಿದಿಲ್ಲ. ಆ ಪ್ರಶ್ನೆಗೆ ಉತ್ತರ ಈ ಶುಕ್ರವಾರ ಸಿಗಲಿದೆ. ಮೇ 4ರಂದು ಚಿತ್ರ ತೆರೆಗೆ ಬರಲಿದೆ. ಸಾಮಾನ್ಯವಾಗಿ ಸಾವಿನ ಮನೆಯಲ್ಲಿ ಬೇಸರ, ವ್ಯಥೆ ಇರುವುದನ್ನು ನೋಡಿದ್ದೇವೆ. ಆದರೆ ಇದೇ ವಾತಾವರಣದಲ್ಲಿ ಒಂದಷ್ಟು ಹಾಸ್ಯದ ಘಟನೆಗಳೂ ಕಾಣಿಸುತ್ತದೆ ಇದನ್ನೇ ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇದಕ್ಕಾಗಿ ನಿರ್ದೇಶಕ ನಾಗರಾಜ ಪೀಣ್ಯ ಸುಮಾರು 60ಕ್ಕೂ ಹೆಚ್ಚು ಸಾವಿನ ಮನೆಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿದ್ದ ಪ್ರಸಂಗಗಳನ್ನು ಕಲೆಹಾಕಿ ಚಿತ್ರಕತೆ ಸಿದ್ಧಪಡಿಸಿದ್ದಾರೆ.

ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಕಥೆಯನ್ನು ಕೇಳಿ ಇದಕ್ಕೆ ಯಾವ ರೀತಿಯಲ್ಲಿ ಹಿನ್ನಲೆ ಸಂಗೀತ ಒದಗಿಸಬೇಕೆಂದು ತಲೆ ಕೆಡಿಸಿಕೊಂಡು ಕೊನೆಗೆ 45 ದಿನ ಕೂತು ಕೆಲಸ ಮಾಡಿದ್ದಾರಂತೆ. ಮನೆಯಲ್ಲಿನ ಒಂದೊಂದು ಪಾತ್ರಗಳು ಸಂತೋಷ ಕೊಡುವ ವೇದಿಕೆಯಾಗಿ ಸೃಷ್ಟಿಯಾಗುತ್ತವೆ. ಮಕ್ಕಳಿಗೆ ಅಂತಲೇ ಒಂದು ಸನ್ನಿವೇಶ ಇದ್ದು, ಆ ಪುಟಾಣಿಗಳು ಮಾಡಿದ ಒಂದು ಸಣ್ಣ ತಪ್ಪು ಸಿನಿಮಾ ಪೂರ್ತಿ ತೆಗೆದುಕೊಂಡು ಹೋಗುವುದು ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ.
ಈ ಚಿತ್ರದಲ್ಲಿ ಭೂತಯ್ಯನ ಮೊಮ್ಮಗನಾಗಿ ಮುಖ್ಯ ಪಾತ್ರದಲ್ಲಿ ಹಾಸ್ಯನಟ ಚಿಕ್ಕಣ್ಣ ಅಭಿನಯಿಸಿದ್ದಾರೆ. ಚಿಕ್ಕಣ್ಣ, ತನ್ನ ಸೋದರಮಾವ 99 ಹೆಣ್ಣುಗಳನ್ನು ತೋರಿಸಿದರೂ ಒಪ್ಪದೆ, ಕೊನೆಗೆ 100ನೆ ಹೆಣ್ಣು ಶೃತಿ ಹರಿಹರನ್ ಅವರನ್ನು ಒಪ್ಪಿಕೊಳ್ಳುವ ಸನ್ನಿವೇಶ ಚಿತ್ರದಲ್ಲಿ ಕಾಮಿಡಿಯಾಗಿ ಮೂಡಿಬಂದಿದೆ. ಸೋದರಮಾವನಾಗಿ ತಬಲಾನಾಣಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್, ರಾಕ್‍ಲೈನ್ ಸುಧಾಕರ್, ಮನ್‍ದೀಪ್‍ರಾಯ್, ಮೋಹನ್ ಜುನೇಜಾ, ಉಮೇಶ್, ಗಿರಿಜಾ ಲೋಕೇಶ್ ಇನ್ನು ಮುಂತಾದವರು ಈ ಚಿತ್ರದಲ್ಲಿ ಒಂದೊಂದು ಪಾತ್ರ ಮಾಡುವ ಮೂಲಕ ಚಿತ್ರಕ್ಕೆ ಜೀವ ತುಂಬಿದ್ದಾರೆ.

ಪ್ರಮುಖವಾಗಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅವರ ಅಭಿನಯದ 1000ದ ಚಿತ್ರ ಇದಾಗಿದೆ. ಕನಕಪುರ ಬಳಿ ಇರುವ ಕೆಮ್ಮಾಳೆ ತಾಣದಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ನಡೆಸಲಾಗಿದೆ. ಚಿತ್ರದ ಕತೆಗೆ ಪೂರಕವಾಗಿ ಒಂದು ಹಾಡು ಕೂಡ ಚಿತ್ರದಲ್ಲಿದೆ. ಈ ಚಿತ್ರದ ನಿರ್ಮಾಪಕರಾಗಿ ಆರ್.ವರಪ್ರಸಾದ್ ಹಾಗೂ ಸಹ ನಿರ್ಮಾಪಕರಾಗಿ ಕೆ.ರವಿಶಂಕರ್, ಅನಿಲ್, ಸುನಿಲ್, ಹನುಮಂತರಾಜು, ಸುರೇಶ್, ವೆಂಕಟೇಶ್ ಸೇರಿ ಸುಮಾರು ಒಂದೂವರೆ ಕೋಟಿ ರೂ. ಖರ್ಚು ಮಾಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೆಳ್ಳಿ ಪರದೆ ಮೇಲೆ ನಗೆಯ ಹೊಳೆ ಹರಿಸಲು ಭೂತಯ್ಯನ ಮೊಮ್ಮಗ ಬರುತ್ತಿದ್ದಾನೆ. ಇತ್ತೀಚೆಗೆ ಈ ಚಿತ್ರದ ಒಂದು ಟೀಸರ್‍ನ್ನು ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕರ್ ಬಿಡುಗಡೆ ಮಾಡಿದರು. ಇನ್ನೇನಿದ್ದರೂ ಆ್ಯಕ್ಷನ್, ಸೆಂಟಿಮೆಂಟ್ ಚಿತ್ರಗಳನ್ನು ನೋಡಿದ ಪ್ರೇಕ್ಷಕರು ನಗೆಗಡಲಲ್ಲಿ ತೇಲಲು ಸಿದ್ಧರಾಗಿರಬೇಕು.

Facebook Comments

Sri Raghav

Admin