ಕರ್ನಾಟಕ ಚುನಾವಣೆಯಲ್ಲಡಗಿದೆ ಹಾಲಿ-ಮಾಜಿ ಹಾಗೂ ಭವಿಷ್ಯದ ಪ್ರಧಾನಿಗಳ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Modi-Devegowda

ಬೆಂಗಳೂರು, ಮೇ 5-ರಾಜ್ಯ ವಿಧಾನಸಭೆ ಚುನಾವಣೆ ದೇಶದ ಹಾಲಿ ಪ್ರಧಾನಿ, ಮಾಜಿ ಪ್ರಧಾನಿ ಹಾಗೂ ಭವಿಷ್ಯದ ಪ್ರಧಾನಿಯೊಬ್ಬರ ಭವಿಷ್ಯ ರೂಪಿಸುವ ಮಹತ್ವದ ಚುನಾವಣೆ ಆಗಿದೆ. 2018ರ ರಾಜ್ಯ ವಿಧಾನಸಭೆ ಚುನಾವಣೆಯನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಇದಕ್ಕೆ ಹತ್ತಾರು ಕಾರಣಗಳಿವೆ. ಬಿಜೆಪಿ ಜಯಗಳಿಸಿ ಅಧಿಕಾರದ ಗದ್ದುಗೆಗೇರಿದರೆ, ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ 2019ರ ಲೋಕಸಭೆ ಚುನಾವಣೆ ಹಾದಿ ಸುಗಮವಾಗಲಿದ್ದು, ಮತ್ತೊಮ್ಮೆ ಪ್ರಧಾನಿಯಾಗುವ ಅವಕಾಶ ಲಭ್ಯವಾಗುವ ಸಾಧ್ಯತೆ ಇದೆ.

ಅಲ್ಲದೆ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲನ್ನು ಮತ್ತೊಮ್ಮೆ ತೆರೆಯುವ ಮೂಲಕ ಬಿಜೆಪಿ ತನ್ನ ಜೈತ್ರಯಾತ್ರೆಯನ್ನು ಮುಂದುವರೆಸಲು ಸಾಧ್ಯವಾಗುತ್ತದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿದರೆ ತಮಿಳುನಾಡು, ಆಂಧ್ರಪ್ರದೇಶ, ಕೇರಳಗಳಲ್ಲಿ ನೆಲೆಯಿಲ್ಲದ ಬಿಜೆಪಿ ಮುಂದಿನ ದಿನಗಳಲ್ಲಿ ನೆಲೆ ಕಂಡುಕೊಳ್ಳಲು ಅವಕಾಶವಾಗುತ್ತದೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮೂರು ದಶಕಗಳ ನಂತರ ಎರಡನೇ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಾಖಲೆ ಬರೆಯುತ್ತದೆ. ಅಲ್ಲದೆ 2019ರ ಲೋಕಸಭೆ ಚುನಾವಣೆಗೆ ಮುನ್ನುಡಿಯಾಗುತ್ತದೆ.

ರಾಹುಲ್‍ಗಾಂಧಿಯವರನ್ನು ಪ್ರಧಾನಿ ಮಾಡುವ ಕಾಂಗ್ರೆಸ್ ಕನಸು ನನಸಾಗುವ ಸಾಧ್ಯತೆ ಇದೆ. ಅಲ್ಲದೆ, ದೇಶಾದ್ಯಂತ ನುಚ್ಚುನೂರಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ರಾಜ್ಯದ ಚುನಾವಣಾ ಫಲಿತಾಂಶದಿಂದ ಗ್ಲೂಕೋಸ್ ನೀಡಿದಂತಾಗುತ್ತದೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ಧರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಕೂಡ ಇದೆ. ಅಲ್ಲದೆ, ಇನ್ನೂ ಹಲವರು ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ಹೊರಹೊಮ್ಮಲಿದ್ದಾರೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್ ಹೊಸ ಶಕ್ತಿ ಕೂಡ ಆಗಲಿದೆ. ಜೆಡಿಎಸ್‍ಪಕ್ಷ ಅಧಿಕಾರಕ್ಕೆ ಬಂದರೆ ದೇಶದಲ್ಲಿ ತೃತೀಯ ರಂಗ ರಚನೆಯ ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಈಗಾಗಲೇ ಚಂದ್ರಬಾಬುನಾಯ್ಡು, ಚಂದ್ರಶೇಖರ್‍ರಾವ್, ಮಾಯಾವತಿ, ಮಮತಾ, ಉತ್ತರ ಭಾರತದ ಹಲವು ಮುಖಂಡರು, ಮಾಜಿ ಪ್ರಧಾನಿ ದೇವೇಗೌಡರ ಸಂಪರ್ಕದಲ್ಲಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಹೆಚ್ಚು ಬಲಯುತವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ತೃತೀಯ ರಂಗ ರಚನೆಗೆ ಹೆಚ್ಚಿನ ಬಲ ಬರುತ್ತದೆ. ತೃತೀಯ ರಂಗದ ಪಕ್ಷಗಳೆಲ್ಲವೂ ಒಟ್ಟಾಗಿ 2019ರ ಲೋಕಸಭೆ ಚುನಾವಣೆಯನ್ನು ಎದುರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆಗ ಮಾಜಿ ಪ್ರಧಾನಿ ದೇವೇಗೌಡರಿಗೆ ಮತ್ತೊಮ್ಮೆ ಪ್ರಧಾನಿ ಪಟ್ಟ ಒಲಿದರೂ ಆಶ್ಚರ್ಯವಿಲ್ಲ.

ಒಟ್ಟಾರೆ ರಾಜ್ಯವಿಧಾನಸಭೆ ಚುನಾವಣೆ ಹಾಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿಯ ಹುದ್ದೆ ಮೇಲೆ ಕಣ್ಣಿಟ್ಟಿರುವ ರಾಹುಲ್‍ಗಾಂಧಿ ಅವರ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ ಎಂದು ವ್ಯಾಖ್ಯಾನಿಸಿದರೆ ತಪ್ಪಾಗಲಾರದು. ಮೇಲ್ನೋಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಪೈಪೋಟಿಯ ಚುನಾವಣೆ ಇದಾಗಿದ್ದರೂ, ಇದರ ಆಳ, ಅಗಲವೇ ಬೇರೆ ಇದೆ.

ಈ ಚುನಾವಣಾ ಫಲಿತಾಂಶ ಇಡೀ ದೇಶದ ಚಿತ್ರಣವನ್ನೇ ಬದಲಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿಯವರಿಗೂ, ಮಾಜಿ ಪ್ರಧಾನಿ ದೇವೇಗೌಡರಿಗೂ, ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿಯವರಿಗೂ ಈ ವಿಷಯ ಸ್ಪಷ್ಟವಾಗಿ ಗೊತ್ತಿದೆ. ಅದಕ್ಕಾಗಿ ಅವರು ತಮ್ಮ ಎಲ್ಲಾ ಸಾಮಥ್ರ್ಯವನ್ನು ಓರೆಗೆ ಹಚ್ಚಿ ಈ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಶತಾಯಗತಾಯ ಈ ಚುನಾವಣೆ ಗೆಲ್ಲಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳು ತುಂಬಾ ಶ್ರಮವಹಿಸುತ್ತಿವೆ. ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಅಧಿಕಾರಕ್ಕೆ ಬರುವ ಮೂಲಕ 2019ರ ಲೋಕಸಭೆ ಚುನಾವಣೆಯಲ್ಲಿ ದೇಶದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕವನ್ನು ಗೆಲ್ಲುವ ಮೂಲಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೇರಿಸಿ 2019ರ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾಗುವ ಪ್ರಯತ್ನ ಮುಂದುವರೆಸಿದ್ದಾರೆ.

ಅದೇರೀತಿ ಮಾಜಿ ಪ್ರಧಾನಿ ದೇವೇಗೌಡರು ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಈ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಇಲ್ಲಿ ತಮ್ಮ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದೇಶದಲ್ಲಿ ತೃತೀಯ ರಂಗ ರಚನೆಗೆ ಮುನ್ನುಡಿ ಬರೆದು ದೆಹಲಿ ಗದ್ದುಗೆಗೇರುವ ಯೋಚನೆಯಲ್ಲಿದ್ದಾರೆ. ಮತದಾರರು ಯಾರಿಗೆ ಒಲಿಯುತ್ತಾರೆ, ಯಾರನ್ನು ಪುರಸ್ಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin