ಗದಗದಲ್ಲಿ ನಿಂತು ಕಾಂಗ್ರೆಸ್ ಗೆ ಗುದ್ದು ನೀಡಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Gadag

ಗದಗ.ಮೇ.05 : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಪ್ರಯುಕ್ತ ಪಕ್ಷದ ಪರ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಇಂದು ಗದಗ ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್ ಪಕ್ಕದ ಜಮೀನಿನಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 2007 ರಲ್ಲಿ ಗೋವಾ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಮಹದಾಯಿ ನೀರನ್ನು ಕೊಡುವುದಿಲ್ಲ ಎಂದಿದ್ದರು. ಗೋವಾದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದ್ದು, ಕರ್ನಾಟಕದಲ್ಲಿ ಬಂದು ಸಮಸ್ಯೆ ಸೃಷ್ಟಿ ಮಾಡಿದ್ದಾರೆ. ಮಹದಾಯಿ ಸಮಸ್ಯೆಯನ್ನ ಮುಂದೆ ಹಾಕುವ ಪ್ರವೃತ್ತಿ ನಮ್ಮದಲ್ಲ. ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ ಅಂದರು.

2007ರಲ್ಲಿ ಸೋನಿಯಾ ಗಾಂಧಿ ಏನು ಹೇಳಿದ್ರು ಅಂತಾ ಸಿಎಂ ಸಿದ್ದರಾಮಯ್ಯರಿಗೆ ಗೊತ್ತಿಲ್ಲ. ಕಾರಣ ಸಿಎಂ ಕಾಂಗ್ರೆಸ್‍ನಲ್ಲಿ ಇರಲಿಲ್ಲ, ಆದ್ರೆ ಯಾವ ದಳದಲ್ಲಿ ಇದ್ರೆಂಬುದು ಅವರಿಗೂ ನೆನಪಿರಲಿಕ್ಕಿಲ್ಲ. ಯಾಕಂದ್ರೆ ಪಕ್ಷ ಬದಲಿಸೋದು ಸಿದ್ದರಾಮಯ್ಯರ ರೂಢಿಯಾಗಿದೆ ಅಂತಾ ವಾಗ್ದಾಳಿ ನಡೆಸಿದರು. ಈ ಹಿಂದೆ ಕರ್ನಾಟಕ, ಗೋವಾ ಮತ್ತು ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರಗಳಿದ್ದರೂ, ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಮಹದಾಯಿ ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡು ಅದನ್ನು ಟ್ರಿಬ್ಯೂನಲ್ ಗೆ ಹಾಕಲಾಯಿತು. ಈ ಸಮಸ್ಯೆ ಮುಂದಿನ ನಿಮ್ಮ ಪೀಳಿಗೆಗೂ ಮುಂದುವರೆಯಬಾರದು ಅಂತಾ ನಾನು ಆಶಿಸುತ್ತೇನೆ ಅಂತಾ ತಿಳಿಸಿದರು. ಗದಗಿನ ಸುತ್ತಮುತ್ತ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಿರುವ ಹತ್ತಿ ಬೆಳೆಗೆ ಪೂರಕವಾಗುವಂತಹ ಜವಳಿ ನೀತಿ ಜಾರಿಗೆ ತರುವ ಮೂಲಕ ಹತ್ತಿ ಬೆಳೆಗಾರರ ಹಿತ ಕಾಯುವ ಭರವಸೆ ನೀಡಿದರು.

ಗೋವಾದಲ್ಲಿ ಚುನಾವಣೆ ಸೋತ ನಂತರ, ಕಾಂಗ್ರೆಸ್ ಮಹದಾಯಿ ವಿಷಯದಲ್ಲಿ ಕರ್ನಾಟಕದ ಜನರ ಮುಂದೆ ನಾಟಕವಾಡುತ್ತಿದೆ. ಆದ ಕಾರಣ ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಸೋಲಲಿದೆ. ಮಹದಾಯಿ ವಿಚಾರವನ್ನು ನಾವು ಮಾತುಕತೆ ಮುಖಾಂತರ ಪರಿಹರಿಸಲು ಬದ್ಧರಾಗಿದ್ದೇವೆ.  ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಸೃಷ್ಟಿಸುತ್ತಿರುವ ಗೊಂದಲವನ್ನು ಎಳೆಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡುತ್ತೇನೆ. 2007 ರಲ್ಲಿ ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ‘ಯಾವುದೇ ಕಾರಣಕ್ಕೂ ಮಹದಾಯಿ ನೀರಿನ ಒಂದು ಹನಿಯನ್ನೂ ಸಹ ಕರ್ನಾಟಕಕ್ಕೆ ಹರಿಸುವುದಿಲ್ಲ’ ಎಂದಿದ್ದರು. ಈ ಮಾತು ಮರೆತುಹೋಯಿತೇ ಮುಖ್ಯಮಂತ್ರಿಗಳೇ? ಅಟಕಾನ, ಲಟಕಾನ, ಬಟಕಾನ ಮಾಡುವುದೇ ಕಾಂಗ್ರೆಸ್‍ನ ಕೆಲಸ. ಎಲ್ಲರಿಗೂ ನೀರಿನ ಹಕ್ಕು ಇದೆ. ಮಹದಾಯಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಾವು ಸಿದ್ಧರಿದ್ದೇವೆ.

ಗದಗ-ವಾಡಿ ರೈಲು ನಿಲ್ದಾಣ ಅಭಿವೃದ್ಧಿಯ ದೃಷ್ಟಿಯಿಂದ ತುಂಬಾ ಅಗತ್ಯವಾಗಿದೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದೆ. ರೈಲು ನಿಲ್ದಾಣಕ್ಕೆ ಬೇಕಾಗಿರುವ ಯೋಜನೆ ಸಿದ್ಧವಿದೆ. ಹಣ ಕೂಡ ಇದೆ. ಆದರೆ ರೈಲು ನಿಲ್ದಾಣಕ್ಕೆ ಬೇಕಾದ ಜಾಗವನ್ನು ಸರ್ಕಾರ ಇನ್ನೂ ಒದಗಿಸಿಕೊಟ್ಟಿಲ್ಲ

ಕಪ್ಪತ್ತಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ ಮಾಡಬಹುದು ಎಂಬುದು ಕಾಂಗ್ರೆಸ್ ಸರ್ಕಾರಕ್ಕೆ ತಿಳಿಯಿತು. ಕೂಡಲೇ ಗಣಿಗಾರಿಕೆ ಆರಂಭಿಸಲು ಷಡ್ಯಂತ್ರ ರೂಪಿಸಿತು. ಆದರೆ ಯಾವಾಗ ಬಿಜೆಪಿ ಮತ್ತು ಇಲ್ಲಿನ ಜನರು ಅದನ್ನು ವಿರೋಧಿಸಲು ಆರಂಭಿಸಿದರೋ, ಒಂದೇ ವರ್ಷದೊಳಗೆ ಅಕ್ರಮ ಗಣಿಗಾರಿಕೆಯ ಆಟಕ್ಕೆ ಅಂತ್ಯ ಹಾಡಿತು. ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವ ಮೂಲಕವಾದರೂ ತಮ್ಮ ಕಿಸೆಗಳನ್ನು ತುಂಬಿಕೊಳ್ಳುವುದು ಕಾಂಗ್ರೆಸ್ ಸಂಸ್ಕೃತಿ. ಕಪ್ಪತ್ತಗುಡ್ಡದ ಅರಣ್ಯಗಳಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಅವಕಾಶಗಳನ್ನು ಕಂಡುಕೊಂಡಿತು.

ಕೆರೆಗಳಲ್ಲಿನ ಹೂಳನ್ನು ಎತ್ತುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಕೆರೆ ಬರಿದಾಗುವುದನ್ನೇ ಅವರು ಕಾಯುತ್ತಿದ್ದಾರೆ, ಬರಿದಾದ ಕೂಡಲೇ ಅದನ್ನು ಬಿಲ್ಡರ್‍ಗಳಿಗೆ ಮಾರಾಟ ಮಾಡಲು ಹೊರಡುತ್ತಾರೆ. ಸುಳ್ಳು ಹೇಳಿ ಜನರ ಕಣ್ಣಿಗೆ ಮಣ್ಣೆರಚುವುದರಲ್ಲಿ ಕಾಂಗ್ರೆಸ್‍ನವರು ನಿಸ್ಸೀಮರು. ಮಹದಾಯಿ ವಿಚಾರದಲ್ಲಿ ಅವರು ಮಾಡುತ್ತಿರುವ ರಾಜಕಾರಣವೇ ಇದಕ್ಕೆ ಉದಾಹರಣೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಟೆಂಡರ್ ಕರೆಯಲಾಗಿತ್ತು. ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮೇಲಿನವರಿಗೆ ಅತಿ ಹೆಚ್ಚು ಹಣವನ್ನು ಯಾರು ತಲುಪಿಸುತ್ತಾರೋ ಅವರಿಗೆ ಹುದ್ದೆಗಳನ್ನು ನೀಡಬೇಕು ಎಂಬ ಒಪ್ಪಂದ ಈಗಲೇ ಆಗಿದೆ. ಮತದಾರರೇ, ಬಹಳ ಜಾಗ್ರತೆಯಿಂದ ಇರಬೇಕು. ಈ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಅನ್ನು ಸೋಲಿಸಲಿದ್ದೀರಿ. ನಂತರ ಅದು ಐಎನ್‍ಸಿ ಬದಲು ‘ಪಿಪಿಪಿ’ ಕಾಂಗ್ರೆಸ್ ಆಗಲಿದೆ. ಪಿ.ಪಿ.ಪಿ. ಕಾಂಗ್ರೆಸ್ ಅಂದರೆ ‘ಪಂಜಾಬ್, ಪುದುಚೆರಿ, ಪರಿವಾರ ಪಾರ್ಟಿ’.  ದುಡ್ಡು ಕೆಟ್ಟದ್ದು ನೋಡಾ ಎಂದು ಸಂತ ಶಿಶುನಾಳ ಷರೀಫರು ಹೇಳಿದ್ದರು. ಶಿಶುನಾಳ ಷರೀಫರ ಮಾತನ್ನು ಕಾಂಗ್ರೆಸ್ ಉಲ್ಟಾ ಮಾಡಿದೆ. ಅಪ್ಪನೂ ದೊಡ್ಡವನಲ್ಲ. ದುಡ್ಡೇ ದೊಡ್ಡಪ್ಪ ಅಂತ ಮಾಡಿದೆ. ಇಲ್ಲಿನ ಮುಖ್ಯಮಂತ್ರಿಗಳಂತೂ ಹಣವೇ ಮುಖ್ಯವೆಂದುಕೊಂಡಿದ್ದು, ಸೀದಾ ರುಪಯ್ಯಾ ಸರ್ಕಾರ ಮಾಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin