ಬಿಜೆಪಿ ಆಡಳಿತಕ್ಕೆ ಭ್ರಷ್ಟಾಚಾರದ ವಿಷಯದಲ್ಲಿ ಚಿನ್ನದ ಪದಕ ನೀಡಬೇಕು : ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--02
ಬೆಂಗಳೂರು, ಮೇ 5- ಉದ್ಯಮಿಗಳ ಮೂರು ಲಕ್ಷ ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದ್ದು, ಅದರ ಕಮಿಷನ್ ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರ ಮನೆ ಸೇರಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಭ್ರಷ್ಟಾಚಾರದ ವಿಷಯದಲ್ಲಿ ಚಿನ್ನದ ಪದಕ ಕೊಡುವುದಾದರೆ ಅದು ಹಿಂದಿನ ಯಡಿಯೂರಪ್ಪ ಅವರ ಬಿಜೆಪಿ ಆಡಳಿತಕ್ಕೆ ಕೊಡಬೇಕು. ಯಡಿಯೂರಪ್ಪ ಅವರ ಭ್ರಷ್ಟಾಚಾರ ಹೆಚ್ಚಾಗಿದ್ದರಿಂದಲೇ ನರೇಂದ್ರ ಮೋದಿ ಅವರು ಈಗ ಎಲ್ಲಾ ಕಡೆ ತಾವೊಬ್ಬರೇ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು, ಯಡಿಯೂರಪ್ಪ ಅವರನ್ನು ಕರೆದುಕೊಂಡು ಹೋಗುತ್ತಿಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಸರ್ಕಾರವನ್ನು ಟೆನ್‍ಪರ್ಸೆಂಟ್ ಸರ್ಕಾರ ಎಂದು ಮೋದಿ ಟೀಕೆ ಮಾಡುತ್ತಾರೆ. ಆದರೆ, ಅವರ ಆರೋಪಕ್ಕೆ ದಾಖಲೆಗಳಿಲ್ಲ. ಬಹುಶಃ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರು ಕಮಿಷನ್ ತೆಗೆದುಕೊಂಡಿದ್ದನ್ನು ಹೇಳುತ್ತಿರಬಹುದು. ನಮ್ಮ ಸರ್ಕಾರ ಯಾವುದೇ ಕಮಿಷನ್ ತೆಗೆದುಕೊಂಡಿಲ್ಲ. ಭ್ರಷ್ಟಾಚಾರ ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ 16 ಮಂದಿ ಸಚಿವರು, ಶಾಸಕರು ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ಅಪರಾಧಗಳಿಗಾಗಿ ಜೈಲಿಗೆ ಹೋಗಿ ಬಂದರು. ನಮ್ಮ ವಿರುದ್ಧ ಅಂತಹ ಒಂದು ಆರೋಪವೂ ಇಲ್ಲ ಎಂದು ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು.

ಬಿಜೆಪಿಯವರ ಡಿಎನ್‍ಎ ಪರೀಕ್ಷೆ ಮಾಡಿಸಿದರೆ ಅವರು ಗೂಬೆಲ್ಸ್ ವಂಶಸ್ಥರು ಎಂಬುದು ಸ್ಪಷ್ಟವಾಗುತ್ತದೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡುವುದು ಗೂಬೆಲ್ಸ್ ತಂತ್ರಗಾರಿಕೆ. ಬಿಜೆಪಿಯವರು ಅದನ್ನೇ ಮಾಡುತ್ತಿದ್ದಾರೆ. ಕರ್ನಾಟಕದ ಅಪರಾಧಗಳ ಸಂಖ್ಯೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶಗಳಿಗಿಂತಲೂ ಕಡಿಮೆ ಇದೆ ಎಂದರು. ಹ್ಯಾರಿಸ್ ಅವರ ಪುತ್ರ ನಲಪಾಡ್ ಪ್ರಕರಣವನ್ನು ಮೋದಿ ಪ್ರಸ್ಥಾಪಿಸಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‍ನ ಕಾರ್ಪೊರೇಟರ್ ದಿವಾನ್‍ಆಲಿ ಮತ್ತ್ನು ಗೋವಿಂದರಾಜು ಅವರನ್ನು ಹಾಡಹಗಲೇ ಕೊಲೆ ಮಾಡಿದರು. ಅವರ ಕಾಲದಲ್ಲಿ ಸರಣಿ ಬಾಂಬ್ ಸ್ಫೋಟಗಳಾದವು. ನಮ್ಮ ಸರ್ಕಾರದಲ್ಲಿ ಕೊಲೆ ಮಾಡುವುದು ಬಿಜೆಪಿ ಸರ್ಕಾರದಲ್ಲಿ ಇದ್ದಷ್ಟು ಸುಲಭವಲ್ಲ ಎಂದು ಹೇಳಿದರು.

ಚೀನಾ ಗೂಡ್ಸ್‍ಗಳಿಗೂ ಮತ್ತು ಮೋದಿ ಅವರ ಮಾತಿಗೂ ಗ್ಯಾರಂಟಿ ಇಲ್ಲ. ವಾರೆಂಟಿ ಇಲ್ಲ. ಬೆಂಗಳೂರನ್ನು ಗಾರ್ಬೆಜ್ ಸಿಟಿ ಮಾಡಿದ್ದು ಬಿಜೆಪಿಯವರು. ನಾವು 7 ಕಡೆ ಕಸ ಸಂಸ್ಕರಣಾ ಘಟಕ ನಿರ್ಮಾಣ ಮಾಡಿ ಕಸದ ಸಮಸ್ಯೆ ಬಗೆಹರಿಸಿದ್ದೇವೆ. ಆದರೂ ಮೋದಿ ಸುಳ್ಳು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಬಿಜೆಪಿಯ ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಯಾವ ಭರವಸೆಗಳನ್ನು ಈಡೇರಿಸಿಲ್ಲ. ದಲಿತರ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತಿಪಕ್ಷದ ನಾಯಕ ಸ್ಥಾನ ನೀಡದೆ ವಂಚನೆ ಮಾಡಿದೆ ಎಂದು ಹೇಳಿದರು.

ಮೋದಿ ಅವರು ಗುಜರಾತಿನ ಅಹಮದಾಬಾದಿಗೆ ಅಂತಾರಾಷ್ಟ್ರೀಯ ಮಾನ್ಯತೆ ತಂದು ಕೊಡುವ ಪ್ರಯತ್ನ ಮಾಡಿದ್ದು, ಅದಕ್ಕಾಗಿ ಬೆಂಗಳೂರಿಗೆ ಕೆಟ್ಟ ಹೆಸರು ತರಲು ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.

Facebook Comments

Sri Raghav

Admin