ಬಿಜೆಪಿ ಮರೆಮಾಚಿದ ಸಾವುಗಳ ನಗ್ನ ಸತ್ಯ ಪುಸ್ತಕ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

cm-in-press

ಬೆಂಗಳೂರು, ಮೇ 6- ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಹೇಳಿದ ಮತ್ತು ಹೇಳದೇ ಮರೆಮಾಚಿದ ಸಾವುಗಳ ನಗ್ನಸತ್ಯ ಎಂಬ ಪುಸ್ತಕವನ್ನು ಕಾಂಗ್ರೆಸ್ ಪ್ರಕಟಿಸಿದೆ. ಐದು ವರ್ಷದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮತೀಯ ದ್ವೇಷದ ಹತ್ಯೆ ಪ್ರಕರಣಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದ್ದು, ಹತ್ಯೆಯಾದವರ ಮತ್ತು ಆರೋಪಿಗಳ ಸಮಗ್ರ ವಿವರ ನೀಡಲಾಗಿದೆ ಹಾಗೂ ತನಿಖೆ ವೇಳೆ ಕಂಡು ಬಂದ ಕಾರಣಗಳನ್ನೂ ನೀಡಲಾಗಿದೆ.

ನಗರದ ಪ್ರೆಸ್‍ಕ್ಲಬ್‍ನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಈ ಪುಸ್ತಕ ಬಿಡುಗಡೆ ಮಾಡಿದರು.
24 ಹತ್ಯೆಗಳು ಚರ್ಚೆಯಾಗಿವೆ. ಅದರಲ್ಲಿ ಮೂಡಬಿದರೆಯ ಪ್ರಶಾಂತ್‍ಪೂಜಾರಿ, ಮಡಿಕೇರಿಯ ಡಿ.ಕೆ.ಕುಟ್ಟಪ್ಪ, ಮೈಸೂರಿನ ಕ್ಯಾತಮಾರನಹಳ್ಳಿಯ ರಾಜು, ಮಂಗಳೂರಿನ ರಾಜೇಶ್‍ಕೊಟ್ಯಾನ್, ಚರಣ್‍ಪೂಜಾರಿ, ದೀಪಕ್‍ರಾವ್, ಶರತ್‍ಕುಮಾರ್, ಕಾರವಾರದ ಪರೇಶ್‍ಮೆಸ್ತಾ, ಕೊಡಗಿನ ಪ್ರವೀಣ್ ಪೂಜಾರಿ, ಶಿವಮೊಗ್ಗದ ವಿಶ್ವನಾಥ್, ಬೆಂಗಳೂರಿನ ರುದ್ರೇಶ್, ಸಂತೋಷ್ ಅವರುಗಳ ಕೊಲೆಯ ಪ್ರಕರಣಗಳ ತನಿಖೆ ಮುಗಿದಿದ್ದು, ಕೆಲವು ಪ್ರಕರಣಗಳಲ್ಲಿ ಪಿಎಫ್‍ಐ ಕೈವಾಡ ಇರುವುದು ಸಾಬೀತಾಗಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಮುಸ್ಲಿಂ ಯುವಕರ ಕೈವಾಡ ಇರುವುದು ಪತ್ತೆಯಾಗಿದೆ. ಉಳಿದ 12 ಪ್ರಕರಣಗಳಲ್ಲಿ ಹಿಂದುಗಳನ್ನು ಕೊಲೆ ಮಾಡಿದ್ದಾರೆ. ಅದರಲ್ಲಿ ಬಹುತೇಕ ಪ್ರಕರಣಗಳು ವಯಕ್ತಿಕ ದ್ವೇಷಗಳಿಗೆ ನಡೆದಿವೆ.

ಆತ್ಮಹತ್ಯೆ, ಕೌಟುಂಬಿಕ ವ್ಯಾಜ್ಯ, ಅಕ್ರಮ ಸಂಬಂಧಗಳಿಂದಲೂ ಕೊಲೆಯಾಗಿವೆ. ಬೆಂಗಳೂರಿನ ಸಿ.ಎನ್.ಶ್ರೀನಿವಾಸ್, ಬಳ್ಳಾರಿಯ ಬಂಡಿರಮೇಶ್, ಕಲಬುರ್ಗಿಯ ಮಹದೇವ ಅವರುಗಳ ಕೊಲೆಗೆ ವಯಕ್ತಿಕ ದ್ವೇಷಗಳೇ ಕಾರಣವಾದರೆ, ಬೊಮ್ಮಸಂದ್ರ ಶ್ರೀನಿವಾಸ್‍ಪ್ರಸಾದ್, ಹುಬ್ಬಳ್ಳಿ-ಧಾರವಾಡದ ಯೋಗೇಶ್‍ಗೌಡ ಅವರ ಕೊಲೆಗೆ ಜಮೀನು ವ್ಯಾಜ್ಯ ಕಾರಣವಾಗಿದೆ ಎಂದು ವಿವರಿಸಿದರು. ತುಮಕೂರಿನ ತಿಪ್ಪೇಶ್ ಕೊಲೆಗೆ ಅಕ್ರಮ ಸಂಬಂಧ ಕಾರಣವಾಗಿದೆ. ಬೆಂಗಳೂರಿನ ಸರ್ಜಾಪುರದ ಸಿ.ಎಂ.ಅಶ್ವಥ್ ಅವರ ಕೊಲೆಗೆ ರಾಜಕೀಯ ದ್ವೇಷ ಕಾರಣ. ಕೊಡಗಿನ ರಾಜು ಕನ್ನಡಬಾನೆ ಅವರು ಕುಡಿದ ಚಟದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನ ಕಾರ್ತಿಕ್ ರಾಜು ಕೌಟುಂಬಿಕ ಕಾರಣದಿಂದ ಹತ್ಯೆಯಾಗಿದ್ದಾರೆ.

ಬೆಂಗಳೂರಿನ ಹರೀಶ್ ಅವರು ಮೀನುಗಾರಿಕೆ ಗುತ್ತಿಗೆ ಸಂಬಂಧವಾಗಿ ಕೊಲೆಯಾಗಿದ್ದಾರೆ, ಪಿರಿಯಾಪಟ್ಟಣದ ರವಿಮಾಗಳ್ಳಿ ಅವರು ಮದ್ಯಪಾನ ಮಾಡಿ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು. ಇನ್ನು 21 ಕೊಲೆ ಪ್ರಕರಣಗಳಲ್ಲಿ ಸಂಘ ಪರಿವಾರದ ಕೈವಾಡವಿದ್ದು, ಅವುಗಳ ಬಗ್ಗೆ ಎಲ್ಲಿಯೂ ಬಾಯಿಬಿಟ್ಟಿಲ್ಲ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.

ಹುಬ್ಬಳ್ಳಿ ಧಾರವಾಡದ ಹುಸೇನ್ ಸಾಬ್ ಮುದ್ಗಲ್, ಅಣ್ಣೀಗೇರಿಯ ಇಸ್ಲಾಯಿಲ್ ಸಾಬ್, ಮಡಿಕೇರಿಯ ಸಾಹುಲ್ ಹಮೀದ್, ಉಳ್ಳಾಲದ ಸಫಾನ್ ಪಿಲ್ಲರ್, ಮೈಸೂರಿನ ಮುಸ್ತಾಫ, ವಿಟ್ಲಾದ ಅಬ್ದುಲ್ ಜಲೀಲ್, ಉಡುಪಿಯ ಅನೀಫ್, ಬಟ್ವಾಳದ ಅಶ್ರಫ್, ಕಾವೂರ್‍ನ ಅಬ್ದುಲ್ ಬಷೀರ್, ಬರ್ಕೆಯ ಯೂಸಫ್ ಮಾಡೂರು, ಬಂಟ್ವಾಳದ ಮುಸ್ತಫ ನಾಸಿರ್ ಅವರ ಹತ್ಯೆಯಲ್ಲಿ ಸಂಘ ಪರಿವಾರದ ಕೈವಾಡವಿದೆ. ಇನ್ನು ಮಂಗಳೂರಿನ ಪ್ರಕಾಶ್ ಕುಳಾಯಿ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ, ಪ್ರತಾಪ್ ಪೂಜಾರಿ, ವಿನಾಯಕ ಬಾಳಿಗ ಅವರ ಕೊಲೆಯಲ್ಲೂ ಸಂಘ ಪರಿವಾರ ಮತ್ತು ಹಿಂದೂಜಾಗರಣ ವೇದಿಕೆಯ ಕಾರ್ಯಕರ್ತರ ಕೈವಾಡವಿದೆ.

ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ಭಜರಂಗದ 11 ಜನ ಕಾರ್ಯಕರ್ತರು ನೀಡಿದ ಮಾನಸಿಕ ಹಿಂಸೆಯಿಂದ ಆತ್ಮಹತ್ಯೆ ಮಾಡಿಕೊಂಡರು. ಮೂಡಿ ಗೆರೆಯ ಧನ್ಯಶ್ರೀ ಬಜರಂಗ ದಳದ ಕಾರ್ಯ ಕರ್ತರು ನೀಡಿದ ಮಾನಸಿಕ ಹಿಂಸೆಯಿಂದ ಆತ್ಮಹತ್ಯೆ ಮಾಡಿಕೊಂಡರು. ವಿಜಯಪುರದ ದಾನಮ್ಮ ಸಂಘ ಪರಿವರಾದ ಬೆಂಬಲಿಗರಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದರು. ಬೆಂಗಳೂರಿನ ರಾಜಗೋಪಾಲನಗರದ ಮಾಜಿ ಕಾರ್ಪೋರೇಟರ್ ಎಚ್.ಎನ್.ಗೋವಿಂದೇಗೌಡ ಅವರನ್ನು ರಾಜಕೀಯ ದ್ವೇಷಕ್ಕಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸಂಘಪರಿವಾರ ಮತ್ತು ಬಿಜೆಪಿಯವರು ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ. ಜತೆಗೆ ಪುಸ್ತಕದಲ್ಲಿ 2008ರಿಂದ ಈವರೆಗಿನ ಅಪರಾಧ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

Facebook Comments

Sri Raghav

Admin