ಮೋದಿ ಪ್ರಚಾರ ರಾಜ್ಯದ ಜನತೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ : ವೇಣುಗೋಪಾಲ್

ಈ ಸುದ್ದಿಯನ್ನು ಶೇರ್ ಮಾಡಿ

Venugopal--01

ಬೆಂಗಳೂರು, ಮೇ 6- ಪ್ರಧಾನಿ ಮೋದಿ ಅವರ ಅಬ್ಬರದ ಪ್ರಚಾರ ರಾಜ್ಯದ ಜನತೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮೋದಿ ಪ್ರವಾಸದ ಬಗ್ಗೆ ಆತಂಕದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಗಳು ಈಗ ನಿರಾಳವಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯ ಸರ್ಕಾರದ ಉತ್ತಮ ಕಾರ್ಯಕ್ರಮಗಳು, ನಿಷ್ಕಳಂಕ ಆಡಳಿತ ಹಾಗೂ ನಾಯಕತ್ವದಿಂದಾಗಿ ಕಾಂಗ್ರೆಸ್ ಗೆದ್ದೇಗೆಲ್ಲುತ್ತದೆ, ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ವಿಶ್ವಾಸ ಎಲ್ಲಾ ಶಾಸಕರಲ್ಲಿತ್ತು. ಆದರೆ, ಎಲ್ಲೋ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಪ್ರವಾಸ ಕೈಗೊಂಡು ಪ್ರಚಾರ ಮಾಡಿದರೆ ರಾಜಕೀಯ ಪರಿಸ್ಥಿತಿ ಬದಲಾಗಬಹುದು ಎಂಬ ಆತಂಕ ಬಹಳಷ್ಟು ಮಂದಿಯಲ್ಲಿತ್ತು.

ಮೋದಿ ಅವರು ಈಗಾಗಲೇ ಮೂರು ದಿನ ಪ್ರಚಾರ ಮಾಡಿದ್ದಾರೆ. ಅವರು ಬಂದು ಹೋದ ನಂತರ ನಾನು ನಮ್ಮ ಅಭ್ಯರ್ಥಿಗಳಿಗೆ ಕರೆ ಮಾಡಿ ಪರಿಸ್ಥಿತಿ ಬದಲಾವಣೆಯಾಗಿದೆಯೇ ಎಂದು ವಿಚಾರಿಸಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿಗಳು ಬಹಳ ನಿರಾಳವಾಗಿದ್ದಾರೆ. ಮೋದಿ ಅವರ ಪ್ರವಾಸ ಮತದಾರರನ್ನು ಸೆಳೆಯಲು ವಿಫಲವಾಗಿದೆ. ಸಹಜವಾಗಿ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ದೊರೆತಿದೆ. ಆದರೆ, ಮತದಾರರು ಬದಲಾವಣೆಯಾಗಿಲ್ಲ ಎಂದು ಹೇಳಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟಬಹುಮತ ಗಳಿಸುತ್ತದೆ. ನಾವು 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಯೇ ಇಲ್ಲ. ಹೀಗಾಗಿ ನಾವು ಯಾವ ಪಕ್ಷದ ಹೊಂದಾಣಿಕೆಯ ಕುರಿತು ಯೋಚಿಸಿಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಬಿಜೆಪಿ ಪ್ರಚಾರಕ್ಕಾಗಿ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಬಲವಾಗಿದ್ದಾರೆ. ಆದರೆ, ಕಾಂಗ್ರೆಸ್ ಕೂಡ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಜನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Facebook Comments

Sri Raghav

Admin