ನಾನು ರಾಹುಲ್‍ ಮತ್ತು ಮೋದಿಗೆ ಗುಲಾಮನಲ್ಲ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01-Rahul-Modi

ಕುಣಿಗಲ್, ಮೇ 8- ನಾನು ರಾಹುಲ್‍ಗಾಂಧಿ ಮತ್ತು ಮೋದಿಗೆ ಗುಲಾಮನಲ್ಲ. ಈ ರಾಜ್ಯದ ಮತದಾರರಿಗೆ ಮಾತ್ರ ಗುಲಾಮ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿದ್ದೇನೆ. ಯಾವುದೇ ಕೋಮು ಗಲಭೆಗೆ ಅವಕಾಶ ನೀಡಿರಲಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಬಾಂಧವರಿಗೆ ರಕ್ಷಣೆ ನೀಡುತ್ತೇನೆ ಎಂದರು.

ಕುಣಿಗಲ್ ತಾಲೂಕಿನಲ್ಲಿ ಕನಕಪುರದ ಧಣಿಗಳು ಹಣ ಚೆಲ್ಲಿ ಅಧಿಕಾರ ಮಾಡಲು ಹೊರಟಿದ್ದಾರೆ. ಅದಕ್ಕೆ ಮತದಾರರು ಅವಕಾಶ ನೀಡಬೇಡಿ ಎಂದರು. ಈ ಬಾರಿ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯವಿಲ್ಲ. 113 ಸ್ಥಾನಗಳನ್ನು ಪಡೆಯುವುದೇ ನಮ್ಮ ಗುರಿ. ಆ ಸ್ಥಾನಗಳ ಪೈಕಿ ನನ್ನ ತಂದೆ ಸಮಾನರಾದ ಡಿ.ನಾಗರಾಜಯ್ಯನವರು ಒಬ್ಬರು. ಅವರನ್ನು ಕೈಬಿಡಬೇಡಿ ಎಂದರು.

ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಜೆಡಿಎಸ್‍ನವರು ನಮ್ಮನ್ನೇ ಬೆಂಬಲಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸುಳ್ಳಿನ ಸಂತೆ. ಅವರ ಮಾತಿಗೆ ಬೆಲೆ ಕೊಡಬೇಡಿ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ. ವಿಧಾನಸೌಧಕ್ಕೆ ಕಳುಹಿಸಿ ತಾಲೂಕಿನ ಅಭಿವೃದ್ಧಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಹರೀಶ್ ನಾಯಕ್, ಜಿಪಂ ಮಾಜಿ ಸದಸ್ಯರಾದ ಕೆ.ಎಚ್.ಶಿವಣ್ಣ, ಪುಟ್ಟಸ್ವಾಮಯ್ಯ, ಜಿಪಂ ಮಾಜಿ ಅಧ್ಯಕ್ಷ ಡಾ.ಬಿ.ಎನ್.ರವಿಬಾಬು ಮತ್ತಿತರರಿದ್ದರು.

Facebook Comments

Sri Raghav

Admin