2019ರ ಚುನಾವಣೆ ನಂತರ ಮೋದಿ ಪ್ರಧಾನಿಯಾಗಿರಲ್ಲ : ರಾಹುಲ್ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

Rahul--0114

ಬೆಂಗಳೂರು,ಮೇ8- 2019ರ ಲೋಕಸಭೆ ಚುನಾವಣೆ ನಂತರ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಇರುವುದಿಲ್ಲ ಎಂದು ಭವಿಷ್ಯ ನುಡಿದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ , ಅದೇ ವೇಳೆಗೆ ಆರ್‍ಎಸ್‍ಎಸ್ ಮತ್ತು ಬಿಜೆಪಿಯನ್ನು ಭಾರತದಿಂದ ಕಿತ್ತೊಗೆಯ್ಯುವುದು ನಮ್ಮ ಮೂಲೋದ್ದೇಶ ಎಂದು ಘೋಷಿಸಿದ್ದಾರೆ. ನಗರದಲ್ಲಿಂದು ಖಾಸಗಿ ಹೋಟೆಲ್‍ನಲ್ಲಿ ಸಮೃದ್ಧ ಭಾರತ ಫೌಂಡೇಷನ್ ಉದ್ಘಾಟಿಸಿ ನಂತರ ವಿವಿಧ ಕ್ಷೇತ್ರಗಳ ತಜ್ಞರ ಜೊತೆ 50 ನಿಮಿಷಕ್ಕೂ ಹೆಚ್ಚು ಕಾಲ ಸಂವಾದ ನಡೆಸಿದ ರಾಹುಲ್ ಗಾಂಧಿ, ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.

ಜನರಲ್ ಪುರಾಣಿಕ್ ಎಂಬುವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರ ಮುಂದಿನ ಅವಧಿಗೆ ಮುಂದುವರೆಯುವುದಿಲ್ಲ. ಮೋದಿ ಪ್ರಧಾನಿಯಾಗಿ ಉಳಿಯಲು ಸಾಧ್ಯವಿಲ್ಲ. ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರತಿ ಪಕ್ಷಗಳು ಒಂದಾದಗಲೆಲ್ಲ ಆಡಳಿತ ಪಕ್ಷ ಕೊಚ್ಚಿ ಹೋಗಿದೆ. ನಮ್ಮ ತಂದೆ ಶೇ.40ರಷ್ಟು ಮತ ಪಡೆದು 415 ಸ್ಥಾನ ಗೆದ್ದು ಅಧಿಕಾರ ಹಿಡಿದಿದ್ದರು. ಆನಂತರ ಪ್ರತಿಪಕ್ಷಗಳು ಒಂದಾದಾಗ ಕಾಂಗ್ರೆಸ್ ಸೋಲಬೇಕಾಯಿತು. ಇನ್ನು ಬಿಜೆಪಿ ಶೇ.31ರಷ್ಟು ಮತ ಪಡೆದಿದೆ. ಮೋದಿ ಆಡಳಿತದಿಂದ ಬೇಸರಗೊಂಡು ಪ್ರತಿಪಕ್ಷಗಳೆಲ್ಲ ಒಗ್ಗೂಡುತ್ತಿವೆ ಎಂದು ಹೇಳಿದರು.

ಶರತ್ ಪವಾರ್ ಅವರು ಒಮ್ಮೆ ನನ್ನನ್ನು ಭೇಟಿಯಾಗಿ ನನ್ನ ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಸೋಲಿಸಲು ಹೋರಾಟ ಮಾಡಿದ್ದೆ. ಆದರೆ ನಾನು ಮಾಡಿದ್ದು ತಪ್ಪು ಎಂದು ಈಗ ಅರ್ಥವಾಗಿದೆ. ಭಾರತದ ಜೀವಸತ್ವ ಉಳಿಯಬೇಕಾದರೆ ನಮ್ಮ ಹೋರಾಟ ವೈಚಾರಿಕತೆಯ ನೆಲೆಯಲ್ಲಿರಬೇಕು. ಅದಕ್ಕೆ ಕಾಂಗ್ರೆಸ್‍ನ ಸಹಕಾರ ಬೇಕು ಎಂದು ಹೇಳಿದ್ದರು.

ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಕೂಡ ಕಾಂಗ್ರೆಸ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದಲ್ಲಿ ಬಿಎಸ್‍ಪಿ, ಕಾಂಗ್ರೆಸ್ ಕೈ ಜೋಡಿಸಿದರೆ ಮತಗಳ ಸಮಾನ ಶೇ.60ರಷ್ಟಾಗಲಿದೆ. ಬಿಜೆಪಿ ಅಲ್ಲಿ 5 ಸ್ಥಾನಗಳನ್ನೂ ಗೆಲ್ಲಲು ಆಗುವುದಿಲ್ಲ. ಈಗ ಗೆದ್ದಿರುವ 72 ಸ್ಥಾನಗಳನ್ನು ಕಳೆದುಕೊಂಡರೆ ಮೋದಿ ಪ್ರಧಾನಿಯಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದರು.
ಮೋದಿ ಬದಲಾಗಿ ರಾಜನಾಥ್ ಸಿಂಗ್ ಅಥವಾ ನಿತಿನ್ ಗಡ್ಕರಿ ಸೇರಿದಂತೆ ಯಾರಾದರೂ ಪ್ರಧಾನಿಯಾಗಬಹುದು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ. ನಾನು ಹೇಳುತ್ತಿರುವ ಲೆಕ್ಕಾಚಾರ ಕೇಳಿ ನಿಮಗೆ ನಗು ಬರಬಹುದು. ಆದರೆ 2019ರ ನಂತರ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ. ಖಂಡಿತ ನನ್ನ ಮಾತನ್ನು ಆಗ ನಂಬುತ್ತೀರ. ಪ್ರತಿಪಕ್ಷಗಳು ಒಗ್ಗೂಡಿವಿಕೆಯಿಂದ ಬಿಜೆಪಿ ಸೋಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿಯಾಗುತ್ತೇನೆ:
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಚುನಾವಣೆ ಗೆದ್ದು ಹೆಚ್ಚು ಸ್ಥಾನ ಗಳಿಸಿದರೆ ಪಕ್ಷದ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ದೊಡ್ಡ ಪಕ್ಷ. ಸಂದರ್ಭ ಅನುಸಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಒಂದು ವೇಳೆ ಅಂಥ ಪರಿಸ್ಥಿತಿ ಎದುರಾದರೆ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ರಾಹುಲ್ ಹೇಳಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಾವಿರಾರು ಪುರುಷರ ಹೆಸರುಗಳಿರುತ್ತವೆ. ಆದರೆ ಮಹಿಳೆಯರ ಹೆಸರು ಬೆರಳೆಣಿಕೆಯಷ್ಟಿದೆ. ಪ್ರಸ್ತುತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡದೇ ಇರುವ ಬಗ್ಗೆ ನನಗೆ ಅಸಮಾಧಾನವಿದೆ. ಅದನ್ನು ಪಕ್ಷದ ನಾಯಕರ ಬಳಿ ವ್ಯಕ್ತಪಡಿಸಿದ್ದೇನೆ. ಸಮಾಧಾನಕರ ವಿಷಯವೆಂದರೆ ಬಿಜೆಪಿಗಿಂತ ನಾವು ಮಹಿಳೆಯರಿಗೆ ಹೆಚ್ಚು ಸ್ಥಾನಗಳನ್ನು ಕೊಟ್ಟಿದ್ದೇವೆ ಎಂದರು.

ದಲಿತರ ಅಭಿವೃದ್ಧಿ ವಿಷಯದಲ್ಲಿ ಯಾರು ಏನೇ ಹೇಳಲಿ ನಾನು ಏಕಾಂಗಿಯಾಗಿಯಾದರೂ ಸರಿ ಇದಕ್ಕೆ ಬದ್ಧನಾಗಿರುತ್ತೇನೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು. ತಮ್ಮ ಅಜ್ಜಿ ಇಂದಿರಾಗಾಂಧಿ ಚಿಕ್ಕ ವಯಸ್ಸಿನಲ್ಲಿ ಕ್ರೀಡೆಯೊಂದನ್ನು ನೋಡಲು ಹೋಗಿದ್ದರು. ಅಲ್ಲಿ ಒಂದು ತಂಡಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಮತ್ತೊಂದು ತಂಡದ ಪರವಾಗಿ ಯಾರೂ ಹುರಿದುಂಬಿಸುತ್ತಿರಲಿಲ್ಲ. ಆದರೆ ಆ ತಂಡವೂ ಸಾಮಥ್ರ್ಯ ಹೊಂದಿತ್ತು. ಒಂದು ಹಂತದಲ್ಲಿ ನನ್ನ ಅಜ್ಜಿ ಯಾರ ಬೆಂಬಲವೂ ಇಲ್ಲದ ತಂಡದ ಪರವಾಗಿ ಜೋರಾಗಿ ಕೂಗಿ ಹುರಿದುಂಬಿಸಿದರಂತೆ. ಆದರೆ ಕ್ರೀಡಾಂಗಣದಲ್ಲಿರುವ ಜನರು ನಮ್ಮ ಅಜ್ಜಿಯನ್ನು ಕೆಟ್ಟದಾಗಿ ನೋಡಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರಂತೆ. ಅದರಿಂದ ಕಂಗಾಲಾದ ಇಂದಿರಾಗಾಂಧಿ ಅವರು ಸುಮ್ಮನೆ ಕುಳಿತರಂತೆ. ನನ್ನ ಬಳಿ ಈ ಕಥೆ ಹೇಳಿದ್ದ ನನ್ನ ಅಜ್ಜಿ ನಾನು ಸುಮ್ಮನೆ ಕೂರಬಾರದು, ಯಾರ ಬೆಂಬಲವನ್ನೂ ಪಡೆಯದೇ ಇರುವ ತಂಡದ ಪರವಾಗಿ ನನ್ನ ಧ್ವನಿಯನ್ನು ಮುಂದುವರೆಸಬೇಕಿತ್ತು ಎಂದಿದ್ದರು. ಅದೇ ರೀತಿ ದಲಿತರ ವಿಷಯದಲ್ಲಿ ನಾನು ಏಕಾಂಗಿಯಾದರೂ ಸರಿ ಯಾರೂ ಏನೇ ಹಾಸ್ಯ ಮಾಡಿದರೂ ಸರಿ ನಾನು ನಿಲ್ಲುತ್ತೇನೆ. ಇದು ನನ್ನ ರಾಜಕೀಯ ಬದ್ಧತೆ ಎಂದು ಹೇಳಿದರು.

Facebook Comments

Sri Raghav

Admin