ಚುನಾವಣೆಗೆ ಶೇ. 50 ರಷ್ಟು ಬಸ್ ನೀಡಲು ಕೆಎಸ್‌ಆರ್‌ಟಿಸಿ ಸಮ್ಮತಿ, ದಿನಕ್ಕೆ 10 ಸಾವಿರ ರೂ. ಬಾಡಿಗೆ

ಈ ಸುದ್ದಿಯನ್ನು ಶೇರ್ ಮಾಡಿ

KSRTC

ಬೆಂಗಳೂರು,ಮೇ 10-ವಿಧಾನಸಭಾ ಚುನಾವಣೆಗೆ ಶೇ. 70ರಷ್ಟು ಬಸ್ ಒದಗಿಸುವ ಬೇಡಿಕೆ ಮುಂದಿಡಲಾಗಿತ್ತು. ಆದರೆ ವಾರಾಂತ್ಯದಲ್ಲಿ ಮತದಾನ ನಡೆಯಲಿರುವ ಕಾರಣ ವಾಹನಗಳ ಅಗತ್ಯ ಪರಿಗಣಿಸಿ ಶೇ. 50 ರಷ್ಟು ಬಸ್ ನೀಡಲು ಕೆಎಸ್‍ಆರ್‍ಟಿಸಿ ಸಮ್ಮತಿಸಿದೆ. ಶನಿವಾರ ಮತದಾನ ನಡೆಯುವ ಕಾರಣ ನಾನಾ ಊರುಗಳಿಗೆ ತೆರಳುವವರು ಸಾಕಷ್ಟು ಮಂದಿ ಇರುತ್ತಾರೆ. ಅದಾಗಲೇ ಮುಂಗಡ ಪಾವತಿ ಫುಲ್ ಆಗಿದ್ದು, ಹೆಚ್ಚುವರಿ ಬಸ್‍ಗಳ ಅಗತ್ಯ ಎದುರಾಗಲಿದೆ. ಆದ್ದರಿಂದ ಯಾವ ಭಾಗಕ್ಕೆ ಎಷ್ಟು ಬಸ್ ಬೇಕೆಂದು ಗಮನಿಸಿ ಹೆಚ್ಚುವರಿ ಬಸ್ ಓಡಿಸಲಾಗುವುದು. ಒಟ್ಟಾರೆ ಬಸ್‍ಗಳಲ್ಲಿ ಶೇ. 70ರಷ್ಟು ಬಸ್‍ಗಳನ್ನು ಚುನಾವಣಾ ಸೇವೆಗೆ ನೀಡಿದರೆ, ದೊಡ್ಡ ಮಟ್ಟದ ಕೊರತೆ ಎದುರಾಗಲಿದೆ. ಇದರಿಂದ ಆಯೋಗಕ್ಕೆ ಮನವಿ ಮಾಡಿದ್ದೇವೆ. ಎದುರಾಗುವ ಕೊರತೆಯನ್ನು ಸರಿದೂಗಿಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.

4 ಸಾವಿರ ಬಸ್:

ಕೆಎಸ್‍ಆರ್‍ಟಿಸಿ ಸದ್ಯ 8 ಸಾವಿರ ಬಸ್‍ಗಳನ್ನು ಹೊಂದಿದೆ. ಇದರಲ್ಲಿ 4 ಸಾವಿರ ಕೆಎಸ್‍ಆರ್‍ಟಿಸಿ ಬಸ್ ಚುನಾವಣಾ ಸೇವೆಗೆ ನೀಡಲಿದ್ದೇವೆ. ಮೇ 11 ಮತ್ತು 12ರಂದು ಕೆಎಸ್‍ಆರ್‍ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೇ 12ರಂದು ಮತದಾನ ನಡೆಯುವುದರಿಂದ 11ರ ಸಂಜೆಯೊಳಗೆ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ನಿಗದಿತ ಮತಗಟ್ಟೆಗಳಿಗೆ ತೆರಳುತ್ತಾರೆ. ಅವರೆಲ್ಲರ ಸಂಚಾರಕ್ಕೆ ನಾಲ್ಕು ಸಾವಿರ ಕೆಎಸ್‍ಆರ್‍ಟಿಸಿ ಮತ್ತು 1 ಸಾವಿರ ಬಿಎಂಟಿಸಿ ಬಸ್‍ಗಳನ್ನು ನೀಡಲಾಗಿದೆ. ಹೀಗಾಗಿ ಕೆಎಸ್‍ಆರ್‍ಟಿಸಿಯಲ್ಲಿ ಉಳಿದ 4 ಸಾವಿರ ಬಸ್‍ಗಳು ಮಾತ್ರ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ. ಇದರಿಂದ ರಾಜ್ಯದ ವಿವಿಧೆಡೆ ತೆರಳುವ ಪ್ರಯಾಣಿಕರಿಗೆ ಕೊಂಚ ಅಡಚಣೆಯಾಗಲಿದೆ. ಬೆಂಗಳೂರು ಮಹಾನಗರದಲ್ಲೂ ಮತದಾನ ಮುನ್ನಾ ದಿನ ಮತ್ತು ಮತದಾನದ ದಿನ ಸಾರ್ವಜನಿಕ ಬಸ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಲಾಗಿದೆ.

10 ಸಾವಿರ ರೂ. ಬಾಡಿಗೆ:

ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಬಸ್‍ಗೆ ದಿನಕ್ಕೆ 10 ಸಾವಿರ ರೂ. ಬಾಡಿಗೆ ಸಿಗಲಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಮಾತ್ರವಲ್ಲ ಎನ್‍ಇಕೆಆರ್‍ಟಿಸಿ, ಎನ್‍ಡಬ್ಲ್ಯುಕೆಆರ್‍ಟಿಸಿ ಸೇರಿ ನಾಲ್ಕು ನಿಗಮಗಳಿಂದ 7 ಸಾವಿರಕ್ಕೂ ಹೆಚ್ಚು ಬಸ್‍ಗಳ ಬಳಕೆ ಆಗಲಿದೆ. ಇದರಿಂದ ದೊಡ್ಡ ಮೊತ್ತದ ಆದಾಯ ಬರುವ ನಿರೀಕ್ಷೆಯಿದೆ.  ಕೆಎಸ್‍ಆರ್‍ಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ನಾವು ಆದಾಯಕ್ಕಾಗಿ ಬಸ್ ನೀಡುತ್ತಿಲ್ಲ. ಸಾರ್ವಜನಿಕರ ಸೇವೆಗೆ ನಮ್ಮ ಸೇವೆ ಮೀಸಲು. ಆದರೆ ತುರ್ತು ಸಂದರ್ಭದಲ್ಲಿ ವಿಶೇಷ ಸೇವೆಗೆ ಬಸ್ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು. ಸರ್ಕಾರಿ ರಜೆ ಇರುವ ಕಾರಣ ಬೆಂಗಳೂರು ನಗರದಲ್ಲಿ ಅಂತಹ ಸಂಚಾರ ಇರುವುದಿಲ್ಲ. ಆದ್ದರಿಂದ ಅಗತ್ಯ ಎದುರಾದರೆ ಬೆಂಗಳೂರು ಹೊರವಲಯ, ಸಮೀಪದ ಜಿಲ್ಲೆಗಳಿಗೆ ಬಿಎಂಟಿಸಿ ಬಸ್‍ಗಳನ್ನೇ ಸೇವೆಗೆ ಬಳಸುವ ಉದ್ದೇಶವನ್ನೂ ಹೊಂದಿದ್ದೇವೆ. ಆದಷ್ಟು ಜನರಿಗೆ ಸಮಸ್ಯೆ ಆಗದಂತೆ ಸೇವೆ ಸಲ್ಲಿಸುತ್ತೇವೆ ಎಂದಿದ್ದಾರೆ. ಎರಡು ದಿನಗಳ ಕಾಲ ಬಸ್ ಸೇವೆಯಲ್ಲಿ ಆಗುವ ಅಡಚಣೆಗೆ ಸಾರ್ವಜನಿಕರು ಸಹಕರಿಸಬೇಕು. ಶನಿವಾರ ಸಂಜೆ ಬಳಿಕ ಯಥಾಪ್ರಕಾರ ಬಸ್‍ಗಳು ಸೇವೆಗೆ ಒದಗಲಿವೆ ಎಂದು ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin