ಮೋದಿ ಭಾಷಣಗಳಿಂದ ಪ್ರಧಾನಿ ಹುದ್ದೆಯ ಘನತೆ ಕಡಿಮೆಯಾಗಿ ಕಾಮಿಡಿ ಶೋನಂತಾಗಿದೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--02
ಬೆಂಗಳೂರು, ಮೇ 10- ನರೇಂದ್ರ ಮೋದಿ ಅವರ ಭಾಷಣಗಳಿಂದ ಪ್ರಧಾನಿ ಹುದ್ದೆಯ ಘನತೆ ಕಡಿಮೆಯಾಗಿ ಕಾಮಿಡಿ ಶೋನಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಸಮ್ಮುಖದಲ್ಲಿ ನಗರದ ಖಾಸಗಿ ಹೋಟೆಲ್‍ನಲ್ಲಿಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಸಂವಿಧಾನಬದ್ಧವಾದ ಎಲ್ಲಾ ಹುದ್ದೆಗಳ ಬಗ್ಗೆಯೂ ಗೌರವವಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಮಾತುಗಳು ಹುದ್ದೆಯ ಘನತೆಗೆ ತಕ್ಕುದಾದುದ್ದಲ್ಲ. ಹಾಗಾಗಿ ಅವರ ಆರೋಪಗಳಿಗೆ ನಾನು ಕಠಿಣ ಶಬ್ಧಗಳಲ್ಲೇ ಪ್ರತಿಕ್ರಿಯಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ಯಾರ ವಿರುದ್ಧವೂ ವಯಕ್ತಿಕ ಟೀಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಹುಲ್‍ಗಾಂಧಿ ಅವರ ನಾಯಕತ್ವದಲ್ಲಿ ಈ ಚುನಾವಣೆಯಲ್ಲಿ ಉತ್ತಮ ಹೋರಾಟ ಮಾಡಿದ್ದೇವೆ. ನಾವು ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಿದ್ದೇವೆ. ಆದರೆ, ಬಿಜೆಪಿಯವರು ವಯಕ್ತಿಕ ದಾಳಿಗೆ ಸೀಮಿತವಾಗಿದ್ದಾರೆ. ರಾಷ್ಟ್ರ, ರಾಜ್ಯದ ಸಮಸ್ಯೆಗಳ ಬಗ್ಗೆ ನಾವು ಪ್ರಸ್ತಾಪ ಮಾಡಿದರೆ, ಮೋದಿ ಯವರು ಕಾಂಗ್ರೆಸ್ ಮುಖಂಡರ ಬಗ್ಗೆ ವಯಕ್ತಿಕ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಜನ ಅವುಗಳನ್ನು ನಂಬುವುದಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ, ವಿದೇಶಾಂಗ ನೀತಿಯ ಬಗ್ಗೆ ಮಾತನಾಡಬೇಕಾಗಿದ್ದ ಪ್ರಧಾನಿ ಅವರು ತಮ್ಮ ಹುದ್ದೆಯ ಘನತೆ ಮರೆತು ಸುಳ್ಳು ಆರೋಪಗಳನ್ನು ಮಾಡಿ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಅದು ಯಶಸ್ವಿಯಾಗುವುದಿಲ್ಲ ಎಂದರು.

ನಮ್ಮ ಸರ್ಕಾರ ಯಾವುದೇ ಜಾತಿ, ಧರ್ಮವನ್ನು ಗುರಿಯಾಗಿಟ್ಟುಕೊಂಡು ಯೋಜನೆಗಳನ್ನು ಮಾಡಿಲ್ಲ. ಎಲ್ಲ ಜನಾಂಗವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿದೆ. ನಮಗೆ ಆಡಳಿತ ವಿರೋಧಿ ಅಲೆ ಇಲ್ಲ. ಜನ ನಮ್ಮ ಪರವಾಗಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.

Facebook Comments

Sri Raghav

Admin