ಹಸೆಮಣೆ ಏರುವ ಮೊದಲು ‘ಪರೀಕ್ಷೆ’ ಬರೆದ ವಧು..!
ಕೆ.ಆರ್.ಪೇಟೆ, ಮೇ 10- ಪದವಿ ವಿದ್ಯಾರ್ಥಿನಿಯೊಬ್ಬರು ತನ್ನ ವಿವಾಹದ ದಿನವೇ ಬಿಕಾಂ ಪರೀಕ್ಷೆ ಬರೆಯುವ ಮೂಲಕ ವಿವಾಹಕ್ಕಿಂತ ತನ್ನ ಭವಿಷ್ಯ ರೂಪಿಸುವ ಶಿಕ್ಷಣವೇ ಮುಖ್ಯ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿ ಹೇಳಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿ ಎ.ವೈ.ಕಾವ್ಯಾ ಎಂಬಾಕೆಯೇ ಸಪ್ತಪದಿ ತುಳಿಯುವ ಮುನ್ನ ಕಲ್ಪತರು ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ತೆರೆಯಲಾಗಿರುವ ಪದವಿ ಪರೀಕ್ಷಾ ಕೇಂದ್ರದಲ್ಲಿ ಬೆಳಿಗ್ಗೆ 9ಗಂಟೆಯಿಂದ 11ಗಂಟೆಯವರೆಗೆ ಪರೀಕ್ಷೆ ಬರೆದು ನಂತರ ಸಪ್ತಪದಿ ತುಳಿದ ವಿದ್ಯಾರ್ಥಿನಿ.
ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಯೋಗೇಶ್ ಮತ್ತು ಸುಧಾ ದಂಪತಿಗಳ ಪುತ್ರಿ ಎ.ವೈ.ಕಾವ್ಯಾ ದ್ವಿತೀಯ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು, ತಾಲೂಕಿನ ಜಾಗಿನಕೆರೆ ಗ್ರಾಮದ ಲೋಹಿತ್ ಎಂಬುವರೊಂದಿಗೆ ವಿವಾಹ ನಿನ್ನೆ (ಮೇ 9)ಗೆ ನಿಶ್ಚಯವಾಗಿತ್ತು. ಚುನಾವಣೆಯ ಹಿನ್ನೆಲೆಯಲ್ಲಿ ಅದೇ ದಿನ ಕಾವ್ಯಾ ಅವರಿಗೆ ಪರೀಕ್ಷೆ ಕೂಡ ನಡೆಯುತ್ತಿತ್ತು. ಈಗಾಗಲೇ ನಾಲ್ಕು ವಿಷಯದ ಪರೀಕ್ಷೆ ಮುಗಿದಿದ್ದು, ಮದುವೆಯ ದಿನವೇ ಬ್ಯಿಸಿನೆಸ್ ಟ್ಯಾಕ್ಸ್ ವಿಷಯದ ಪರೀಕ್ಷೆ ಎದುರಾಗಿತ್ತು. ಮನೆಯಲ್ಲಿ ಪೆÇೀಷಕರು ಹಾಗೂ ವರನ ಮನೆಯವರನ್ನು ಒಪ್ಪಿಸಿ ಪರೀಕ್ಷೆ ಬರೆದಿದ್ದಾರೆ.
ದಾರಾ ಮುಹೂರ್ತವು ಬೆಳಗ್ಗೆ 11 ರಿಂದ 11.45 ರವರೆಗೆ ಇತ್ತು. ಪರೀಕ್ಷೆ ಬರೆದು ಸಕಾಲಕ್ಕೆ ಬಂದು ವರ ಲೋಹಿತ್ ಅವರೊಂದಿಗೆ ಸಪ್ತಪದಿ ತುಳಿದರು. ವಧು ಪರೀಕ್ಷೆಗೆ ಹೋಗಿದ್ದರಿಂದ ವಿವಾಹಕ್ಕೆ ಬಂದಿದ್ದ ವರ ಮತ್ತು ವಧುವಿನ ಸಂಬಂಧಿಕರು ವಧುವಿನ ಆಗಮನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ವಿವಾಹದ ದಿನವೇ ಎದುರಾದ ಪರೀಕ್ಷೆಯನ್ನು ಧೈರ್ಯವಾಗಿ ಬರೆಯುವ ಮೂಲಕ ವಿವಾಹಕ್ಕಿಂತಲೂ ಭವಿಷ್ಯ ರೂಪಿಸುವ ಶಿಕ್ಷಣವೇ ಮುಖ್ಯ ಎಂಬ ಸಂದೇಶವನ್ನು ಕಾವ್ಯಾ ನಿರೂಪಿಸಿದ್ದಾರೆ.