ಬಸ್ ಗಳ ಕೊರತೆಯಿಂದ ಪ್ರಯಾಣಿಕರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

Mejestic-01
ಬೆಂಗಳೂರು, ಮೇ 11-ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳನ್ನು ನೀಡಿರುವುದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಕಂಡುಬಂದಿತು. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆ ಬಸ್‍ಗಳನ್ನು ಚುನಾವಣೆ ಕಾರ್ಯಕ್ಕಾಗಿ ನೀಡಲಾಗಿದೆ. ಹೀಗಾಗಿ ದೈನಂದಿನ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬಸ್‍ಗಳ ಸಂಚಾರ ವಿರಳವಾದ್ದರಿಂದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ತಮ್ಮ ಊರು ನಗರಗಳಿಗೆ ತೆರಳಲು ಕಾದು ಕುಳಿತಿದ್ದ ದೃಶ್ಯ ಹಲವೆಡೆ ಕಂಡುಬಂದಿತು. ಇಂದು ಮತ್ತು ನಾಳೆ ಎರಡೂ ದಿನವೂ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಪ್ರಯಾಣಿಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಈಗಾಗಲೇ ಸಾರಿಗೆ ಸಂಸ್ಥೆಗಳು ಮನವಿ ಮಾಡಿವೆ.

ಕೆಎಸ್‍ಆರ್‍ಟಿಸಿಯಿಂದ 4 ಸಾವಿರ ಬಸ್‍ಗಳನ್ನು ಚುನಾವಣಾ ಕಾರ್ಯಕ್ಕಾಗಿ ನೀಡಲಾಗಿದೆ. ಹೀಗಾಗಿ ನಗರ, ಗ್ರಾಮೀಣ ಪ್ರದೇಶಗಳಲ್ಲೂ ಬಸ್‍ಗಳ ಸಂಚಾರ ವಿರಳವಾಗಿತ್ತು. ಬಿಎಂಟಿಸಿಯ ಒಂದೂವರೆ ಸಾವಿರ ಬಸ್‍ಗಳನ್ನು ಚುನಾವಣೆಗೆ ನೀಡಲಾಗಿದ್ದರೂ, ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿರುವುದರಿಂದ ಹೆಚ್ಚಿನ ತೊಂದರೆ ಉಂಟಾಗುವುದಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಂದ ತಮ್ಮ ತಮ್ಮ ಊರುಗಳಿಗೆ ತೆರಳುವಂತಹ ಪ್ರಯಾಣಿಕರಿಗೆ ಸಕಾಲಕ್ಕೆ ಬಸ್ ಸಿಗದೆ ತೊಂದರೆ ಅನುಭವಿಸುವಂತಾಯಿತು. ಇದೇ ಸಂದರ್ಭದಲ್ಲಿ ಖಾಸಗಿ ಬಸ್‍ಗಳ ದರವೂ ಕೂಡ ಏರಿಕೆ ಮಾಡಿದ್ದರಿಂದ ಬಸ್ ದರದ ಏರಿಕೆಯ ಬಿಸಿಯೂ ಪ್ರಯಾಣಿಕರಿಗೆ ತಟ್ಟಿದೆ.   ಭಾನುವಾರದಿಂದ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಎಂದಿನಂತೆ ಮುಂದುವರೆಯಲಿದೆ ಎಂದು ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ.

Facebook Comments

Sri Raghav

Admin