ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ, ಶೇ.70ಕ್ಕಿಂತ ಹೆಚ್ಚು ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

WhatsApp Image 2018-05-12 at 10.51.55 AM

ಬೆಂಗಳೂರು. ಮೇ.12 : ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. 222 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ 2,636 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಯಾರು ಅಧಿಕಾರದ ಗದ್ದುಗೆ ಏರಬೇಕೆಂಬುದನ್ನು ತಿಳಿಯಲು ಮಂಗಳವಾದರದವರೆಗೆ ಕಾಯಬೇಕು. ರಾಜ್ಯ ವಿಧಾನಸಭೆಯ 222 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.70ಕ್ಕಿಂತ ಹೆಚ್ಚು ಮತದಾನವಾಗಿರುವ ಸಾಧ್ಯತೆಯಿದೆ. ಅಧಿಕೃತವಾಗಿ ಚುನಾವಣಾ ಆಯೋಗ ಇನ್ನೂ ಮತದಾನದ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿ ರಾಜ್ಯಾದ್ಯಂತ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ಯುವಜನತೆ, ಹಿರಿಯ ನಾಗರಿಕರು, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ ಎಂದರು.  ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಮತಗಟ್ಟೆ ಸಂಖ್ಯೆ 2ರಲ್ಲಿ ಇವಿಎಂ ಯಂತ್ರದ ತೊಂದರೆಯಿಂದ ಈ ಮತಗಟ್ಟೆಯಲ್ಲಿ ಮೇ 14ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮರು ಮತದಾನ ನಡೆಸಲಾಗುವುದು. ಈಗಾಗಲೆ ಮತದಾನ ಮಾಡಿರುವವರು ಮತ್ತೆ ಮತ ಹಾಕಬೇಕು. ಯಾವ ಬೆರಳಿಗೆ ಶಾಯಿ(ಇಂಕ್) ಹಾಕಬೇಕು ಎಂಬುದರ ಕುರಿತು ಶೀಘ್ರದಲ್ಲೆ ನಿರ್ಧರಿಸಲಾಗುವುದು ಎಂದರು.

ಚುನಾವಣೆ ನಡೆಯದ ಜಯನಗರ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆಗಳನ್ನು ಆರಂಭಿಸಲಾಗಿದೆ. 222 ಕ್ಷೇತ್ರಗಳ ಮತದಾನದ ಎಣಿಕೆ ಕಾರ್ಯವು ಮೇ 15ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ ಎಂದು ಸಂಜೀವ್‌ಕುಮಾರ್ ತಿಳಿಸಿದ್ದಾರೆ.  ರಾಜ್ಯದಲ್ಲಿ ಮತದಾನ ಶಾಂತಿಯುತವಾಗಿ ನೆರವೇರುವಲ್ಲಿ ಶ್ರಮಿಸಿದ ರಾಜ್ಯದ ಜಿಲ್ಲಾಧಿಕಾರಿಗಳು, ಚುನಾವಣಾಧಿಕಾರಿಗಳು, ಚುನಾವಣೆಗೆ  ನಿಯೋಜಿಸಿದ್ದ ಸಿಬ್ಬಂದಿ, ಪೊಲೀಸರು, ಕೇಂದ್ರಸೇನೆ, ಅರೆಸೇನೆ, ಬೇರೆ ರಾಜ್ಯದಿಂದ ಬಂದಿದ್ದ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿರುಬಿಸಿಲನ್ನು ಲೆಕ್ಕಿಸದೆ ಮತದಾರರು ಉತ್ಸಾಹದಿಂದ ಮತಚಲಾಯಿಸಿದರು. ನಗರ ಪ್ರದೇಶಗಳಿಗಿಂತ ಗ್ರಾಮೀಣ ಮತಕ್ಷೇತ್ರಗಳಲ್ಲಿ ಮತದಾರರು ಹುರುಪಿನಿಂದ ತಮ್ಮ ಹಕ್ಕು ಚಲಾಯಿಸಿದರೆಂದು ನಮ್ಮ ಜಿಲ್ಲಾ ಪ್ರತಿನಿಧಿಗಳು ವರದಿ ಮಾಡಿದ್ದಾರೆ.
ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಲ್ಲೆಡೆ ಭಾರೀ ಬಂದೋಬಸ್ತ್ ಮಾಡಲಾಗಿದ್ದು, ಗುರುತಿಸಲಾಗಿದ್ದ 12 ಸಾವಿರ ಸೂಕ್ಷ್ಮ ಮತಗಟ್ಟೆಗಳಲ್ಲಿ   ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿತ್ತು.  ಈ ಬಾರಿ ಎಲ್ಲರನ್ನೂ ಒಳಗೊಂಡ ಚುನಾವಣೆ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗ ಹಲವು ವಿಶೇಷ ಕ್ರಮಗಳನ್ನು ಕೈಗೊಂಡಿತ್ತು.

ಮಹಿಳಾ ಮತದಾರರು ನಿರಾಂತಕವಾಗಿ ಮತ ಚಲಾಯಿಸಲು ನೆರವಾಗುವುದಕ್ಕೆ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ 601 ಪಿಂಕ್ ಬೂತ್‌ಗಳು, ದಿವ್ಯಾಂಗ ಮತದಾರರಿಗಾಗಿ ರ‌್ಯಾಂಪ್‌ಗಳು, ವೀಲ್ ಚೇರ್‌ಗಳ ವ್ಯವಸ್ಥೆ, ದೃಷ್ಠಿ ವಿಕಲಚೇತನ ಮತದಾರರಿಗಾಗಿ ಬ್ರೈಲ್ ಲಿಪಿಯಲ್ಲಿ ಮತಪತ್ರಗಳನ್ನು ಒದಗಿಸಿದ್ದು, ಮಂಗಳಮುಖಿಯರಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಅವರನ್ನೂ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿರುವುದು ಈ ವಿಧಾನಸಭಾ ಚುನಾವಣೆಯ ಕೆಲವು ವೈಶಿಷ್ಟ್ಯಗಳಾಗಿವೆ. ಅಂದಾಜು 5ಸಾವಿರದ 55 ಮಂಗಳಮುಖಿಯರು ಮತದಾರರ ಪಟ್ಟಿಗೆ ಈ ಬಾರಿ ಹೆಸರು ನೋಂದಾಯಿಸಿದ್ದರು.
ಇದೇ ಮೊದಲ ಬಾರಿಗೆ ಮತದಾನ ಮಾಡಿದ 2 ಸಾವಿರದ 744 ಯುವ ಜನರು ಸಂಭ್ರಮದಿಂದ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಎಲ್ಲಾ ಮತದಾರರ ಅನುಕೂಲಕ್ಕಾಗಿ ಇಂದು ವೇತನ ಸಹಿತ ರಜೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಒಟ್ಟು 3 ಲಕ್ಷದ 65 ಸಾವಿರ ಚುನಾವಣಾ ಸಿಬ್ಬಂದಿ ಮತಗಟ್ಟೆ ನಿರ್ವಹಣೆ ಕರ್ತವ್ಯ ಹಾಗೂ 1 ಲಕ್ಷದ 40 ಸಾವಿರ ಪೊಲೀಸ್ ಸಿಬ್ಬಂದಿ ಭದ್ರತಾ ವ್ಯವಸ್ಥೆಗಳನ್ನು ನಿರ್ವಹಿಸಿದರು. ಹೆಚ್ಚುವರಿಯಾಗಿ  ಕೇಂದ್ರೀಯ ಪ್ಯಾರಾ ಮಿಲಿಟರಿ, ಬಿ.ಎಸ್.ಎಫ್., ಇಂಡೋಟಿಬೇಟಿಯನ್ ಪಡೆಯ 585 ತುಕಡಿಗಳು ಮತ್ತು ನೆರೆ ರಾಜ್ಯಗಳ ಅಂದಾಜು ಏಳೂವರೆ ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ರಾಜ್ಯ ರಸ್ತೆ ಸಾರಿಗೆ ನಿಗಮದ 3 ಸಾವಿರದ 400 ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮದ 1 ಸಾವಿರದ 400 ಬಸ್ಸುಗಳನ್ನು ಚುನಾವಣಾ ಸಿಬ್ಬಂದಿಯ ಸಾರಿಗೆ ಸೌಕರ್ಯಕ್ಕಾಗಿ ಬಳಸಲಾಯಿತು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗ ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತದಾರರ ಅನುಕೂಲಕ್ಕಾಗಿ ಈ ಬಾರಿ ಮತದಾನದ ಅವಧಿಯನ್ನು ಒಂದು ತಾಸು, ಸಂಜೆ 6ಗಂಟೆಯವರೆಗೆ ವಿಸ್ತರಿಸಲಾಗಿತ್ತು.

ಸಂಜೆಯ 6 ಗಂಟೆ ವರೆಗೆ ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನವಾಗಿದೆ ಎಂಬ ವಿವವ ಈ ಕೆಳಕಂಡಂತಿದೆ.
ಬೆಳಗಾವಿ-ಶೇ.71 – ಬಾಗಲಕೋಟೆ-ಶೇ.68
ವಿಜಯಪುರ(ಬಿಜಾಪುರ)-ಶೇ.63 – ಕಲಬುರಗಿ(ಗುಲ್ಬರ್ಗ)-ಶೇ.56
ಬೀದರ್-ಶೇ.59 – ರಾಯಚೂರು-ಶೇ.61
ಕೊಪ್ಪಳ-ಶೇ.70 – ಗದಗ-ಶೇ.68
ಧಾರವಾಡ-ಶೇ.66 – ಉತ್ತರ ಕನ್ನಡ-ಶೇ.71
ಹಾವೇರಿ-ಶೇ.76 – ಬಳ್ಳಾರಿ-ಶೇ.66
ಚಿತ್ರದುರ್ಗ-ಶೇ.76 – ದಾವಣಗೆರೆ-ಶೇ.70
ಶಿವಮೊಗ್ಗ-ಶೇ.73 – ಉಡುಪಿ-ಶೇ.75
ಚಿಕ್ಕಮಗಳೂರು-ಶೇ.70 – ತುಮಕೂರು-ಶೇ.73
ಚಿಕ್ಕಬಳ್ಳಾಪುರ-ಶೇ.79 – ಕೋಲಾರ-ಶೇ.77
ಬೆಂಗಳೂರು ಗ್ರಾಮಾಂತರ-ಶೇ.76
ರಾಮನಗರ-ಶೇ.80 – ಮಂಡ್ಯ-ಶೇ.78
ಹಾಸನ-ಶೇ.77 – ದಕ್ಷಿಣ ಕನ್ನಡ-ಶೇ.73
ಕೊಡಗು-ಶೇ.69 – ಮೈಸೂರು-ಶೇ.68
ಚಾಮರಾಜನಗರ-ಶೇ.78 – ಯಾದಗಿರಿ-ಶೇ.60
ಬೆಂಗಳೂರು(ಕೇಂದ್ರ)-ಶೇ.51 – ಬೆಂಗಳೂರು(ಉತ್ತರ)-ಶೇ.49
ಬೆಂಗಳೂರು(ದಕ್ಷಿಣ)-ಶೇ.49 – ಬೆಂಗಳೂರು(ನಗರ)-ಶೇ.51

Facebook Comments

Sri Raghav

Admin