ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಎಚ್‍ಡಿಕೆ ಕುಟುಂಬ

ಈ ಸುದ್ದಿಯನ್ನು ಶೇರ್ ಮಾಡಿ

kumara-adi

ಬೆಂಗಳೂರು, ಮೇ 12- ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಇಂದು ಬೆಳಗ್ಗೆ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಅವರೊಂದಿಗೆ ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮುಂದಿನ ಐದು ವರ್ಷಕ್ಕೆ ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ರಾಜ್ಯದ ಮತದಾರರ ಮೇಲಿದೆ. ಇಂದು ಆ ಜವಾಬ್ದಾರಿಯನ್ನು ನಿರ್ವಹಿಸುವ ಪ್ರಮುಖ ದಿನ . ತಾವು ಮತದಾನ ಮಾಡುವ ಮುನ್ನ ಆದಿಚುಂಚನಗಿರಿ ಮಠದ ಶ್ರೀ ಕಾಲಭೈರವೇಶ್ವರ ಸ್ವಾಮೀಜಿ ಹಾಗೂ ಶ್ರೀಗಳ ಆಶೀರ್ವಾದ ಪಡೆಯಲು ಆಗಮಿಸಿದ್ದೆ ಎಂದು ಹೇಳಿದರು. ಪ್ರತಿಯೊಬ್ಬರೂ ಹೆಚ್ಚಿನ ರೀತಿಯಲ್ಲಿ ಮತದಾನದಲ್ಲಿ ಪಾಲ್ಗೊಂಡು ಉತ್ತಮ ಆಡಳಿತ ಮಾಡುವ ಪಕ್ಷ ಹಾಗೂ ಸರ್ಕಾರವನ್ನು ಆಯ್ಕೆ ಮಾಡಬೇಕೆಂದು ಇದೇ ವೇಳೆ ಮನವಿ ಮಾಡಿದರು. (ರಾಜ್ಯ  ವಿಧಾನಸಭಾ ಚುನಾವಣೆ : ಮತದಾನದ Live Updates )

ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಈ ಚುನಾವಣೆಯಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದು, ಅದಕ್ಕೆ ಶಕ್ತಿ ತುಂಬಬೇಕು ಎಂದು ಜನರಲ್ಲಿ ಕೋರಿರುವುದಾಗಿ ಹೇಳಿದರು.
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗ ಪರಿಣಾಮಕಾರಿಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಸಫಲವಾಗಿಲ್ಲ. ಬಹುತೇಕ ಎಲ್ಲಾ ಪಕ್ಷಗಳು ಹಣ ಹಂಚಿವೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಹಣ ದೊರೆತಿದೆ. ಇದು ಯಾರ ಹಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಲಿದೆ. ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಹಣ ಹಂಚಿಕೆ ನಡೆದಿದೆ ಎಂದು ಆರೋಪಿಸಿದರು.

ರಾಜರಾಜೇಶ್ವರಿನಗರದಲ್ಲಿ ದೊರೆತ ಮತದಾರರ ಗುರುತಿನ ಚೀಟಿ ಸಂಗ್ರಹದಂತಹ ಪ್ರಕರಣಗಳು ರಾಜ್ಯದ ಸುಮಾರು 20 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದೆ. ಇದರಲ್ಲಿ ಸರ್ಕಾರ ಭಾಗಿಯಾಗಿದ್ದು, ಚುನವಾಣಾ ಆಯೋಗ ಬೆಳಕಿಗೆ ತರುವಲ್ಲಿ ಯಡವಿದೆ ಎಂದು ದೂರಿದರು. ಆದಾಯ ತೆರಿಗೆ ಅಧಿಕಾರಿಗಳ ದಾಳಿ ಬಿಜೆಪಿ ಅಭ್ಯರ್ಥಿಗಳ ಮನೆಗಳ ಮೇಲೆ ನಡೆಯಲಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮನೆಗಳ ಮೇಲೆ ನಡೆದಿದೆ ಎಂದು ಟೀಕಿಸಿದರು.

Facebook Comments

Sri Raghav

Admin