ಅರಸೀಕೆರೆಯಲ್ಲಿ ಹ್ಯಾಟ್ರಿಕ್ ಸಾಧಿಸಿದ ಕೆ.ಎಂ.ಶಿವಲಿಂಗೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Hatrik

ಅರಸೀಕೆರೆ, ಮೇ 16- ಸತತ ಮೂರನೇ ಬಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನು ಆಶೀರ್ವದಿಸುವ ಮೂಲಕ ಕ್ಷೇತ್ರದ ಜನತೆ ಹ್ಯಾಟ್ರಿಕ್ ಗೆಲುವಿನ ಉಡುಗೊರೆ ನೀಡಿ ಹೊಸ ಇತಿಹಾಸ ಬರೆದಿದ್ದಾರೆ. ಸದಾ ಬದಲಾವಣೆ ಬಯಸುತ್ತಿದ್ದ ಕ್ಷೇತ್ರದ ಜನತೆ ಒಮ್ಮೆ ಶಾಸಕರಾದವರನ್ನು ಮತ್ತೊಮ್ಮೆ ಕ್ಷೇತ್ರದಿಂದ ಆಯ್ಕೆ ಮಾಡದೇ ಹೊಸ ಮುಖಗಳಿಗೆ ಮಣೆ ಹಾಕುವ ಮನಃಸ್ಥಿತಿ ಬೆಳೆಸಿಕೊಂಡು ಬಂದಿದ್ದರು. ಇದರಿಂದ ರಾಜಕೀಯವಾಗಿ ಕ್ಷೇತ್ರದ ಯಾರೊಬ್ಬರು ಪ್ರಬಲವಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.

ಹಾಗಾಗಿ ಕ್ಷೇತ್ರದ ಅಭಿವೃದ್ದಿಯೂ ಹಿನ್ನಡೆಯಾಗಲು ಕಾರಣವಾಗಿತ್ತು. ಎಂಬ ರಾಜಕಾರಣಿಗಳ ವಾದವನ್ನು ಕ್ಷೇತ್ರದ ಮತದಾರರು ಒಪ್ಪಿಕೊಂಡವರಂತೆ ಸತತ ಮೂರನೇ ಬಾರಿಗೆ ಶಿವಲಿಂಗೇಗೌಡರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿಕೊಡುವ ಮೂಲಕ ನಮ್ಮ ಮನಃಸ್ಥಿತಿ ಬದಲಾಯಿಸಿಕೊಂಡಿದ್ದಾರೆ.

ಈ ಮೂಲಕ ಕ್ಷೇತ್ರದ ಅಭಿವೃದ್ದಿಗೆ ನಿಮ್ಮ ಕೊಡುಗೆ ನೀಡಿ ಎಂಬ ಸ್ಪಷ್ಟ ಸಂದೇಶವನ್ನು ಜನತೆ ಜಿಲ್ಲಾ ಜೆಡಿಎಸ್ ನಾಯಕರು ಹಾಗೂ ಶಾಸಕ ಶಿವಲಿಂಗೇಗೌಡರಿಗೆ ರವಾನಿಸಿದ್ದಾರೆ. ಮಾಜಿ ಶಾಸಕ ದಿ.ಡಿ.ಬಿ. ಗಂಗಾಧರಪ್ಪ ಹೊರತು ಪಡಿಸಿದರೆ ಮತ್ಯಾರು ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಉದಾಹರಣೆ ಇಲ್ಲ. ಇವರ ಬಳಿಕ ಶೀವಲಿಂಗೇಗೌಡರು 2008-2013 ರಲ್ಲಿ ಕ್ಷೇತ್ರದ ಮತದಾರರ ವಿಶ್ವಾಸಗಳಿಸಿ ಎರಡು ಬಾರಿ ಆಯ್ಕೆಯಾಗಿದ್ದರು. ಆದರೆ ಮೂರನೇ ಬಾರಿ 93,986 ಮತಗಳನ್ನು ಪಡೆದು ತಮ್ಮ ಪ್ರತಿ ಸ್ಪರ್ಧಿ ಕಾಂಗ್ರೆಸ್‍ನ ಜಿ.ಬಿ. ಶಶಿಧರ್ ಅವರನ್ನು 43,694 ಸಾವಿರದ ಮತಗಳ ಅಂತರದಿಂದ ಸೋಲಿಸುವ ಮೂಲಕ ಮೇಲುಗೈ ಸಾಧಿಸಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ.

ಶಿವಲಿಂಗೇಗೌಡರ ಗೆಲುವಿಗೆ ನಗರದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರಲ್ಲದೇ ಪರಸ್ಪರ ಬಣ್ಣ ಹಚ್ಚಿ ಓಕುಳಿಯಾಡಿ ಸಂಭ್ರಮಿಸಿದರು. ಹಾಸನ ರಸ್ತೆ ಮಾರ್ಗವಾಗಿ ನಗರಕ್ಕೆ ಆಗಮಿಸಿದ ಶಾಸಕ ಶಿವಲಿಂಗೇಗೌಡರಿಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಜೆಡಿಎಸ್ ಅಭಿಮಾನಿಗಳು ಹಾಗೂ ಬೆಂಬಲಿಗರಿಂದ ಭವ್ಯ ಸ್ವಾಗತ ದೊರೆಯಿತು.

ಬೃಹತ್ ಮಾಲೆಗಳ ಸಮರ್ಪಣೆ: ಹ್ಯಾಟ್ರಿಕ್ ಗೆಲುವು ಸಾಧಿಸಿ ನಗರಕ್ಕೆ ಆಗಮಿಸಿದ ಶೀವಲಿಂಗೇಗೌಡರಿಗೆ ಭವ್ಯ ಸ್ವಾಗತ ದೊರೆಯಿತಲ್ಲದೇ ಮತ್ತೊಂದೆಡೆ ಕೊಬ್ಬರಿ ಗುಲಾಬಿ ಹಾಗೂ ನಾನಾ ಪುಷ್ಪಗಳ ಬೃಹತ್ ಹಾರಗಳನ್ನು ಕಾರ್ಯಕರ್ತರು ಹಾಕುವ ಮೂಲಕ ವಿಜಯ ಮಾಲೆಯನ್ನು ತೊಡೆಸಿ ಸಂಭ್ರಮಿಸಿದರು.
ಶಾಸಕ ಶಿವಲಿಂಗೇಗೌಡ ಮಾತನಾಡಿ, ಕ್ಷೇತ್ರದ ಜನತೆ ಅಭಿವೃದ್ದಿ ಪರ ಇದ್ದಾರೆ ಎನ್ನುವುದಕ್ಕೆ ನನ್ನ ಗೆಲುವೇ ಸಾಕ್ಷಿ. ಜಾತಿ, ಮತ ನೋಡದೇ ಪ್ರತಿಯೊಂದು ಸಮಾಜವೂ ನನ್ನ ಗೆಲುವಿಗಾಗಿ ಆಶೀರ್ವಾದಿಸಿದ್ದಾರೆ. ನನ್ನ ಜವಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದು ಕ್ಷೇತ್ರದ ಜನತೆಯ ನಂಬಿಕೆ ಹಾಗೂ ವಿಶ್ವಾಸಕ್ಕೆ ಚುತಿ ತಾರದ ರೀತಿ ರಾಗ ದ್ವೇಷ ಮಾಡದೇ ಜನತೆ ಹಾಗೂ ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಎಂ ಸಮೀಉಲ್ಲಾ , ತಾಲೂಕು ಪಂಚಾಯಿತಿ ಅಧ್ಯಕ್ಷೆ ರೂಪಾ ಗುರುಮೂರ್ತಿ, ಉಪಾಧ್ಯಕ್ಷ ಬಸವಲಿಂಗಪ್ಪ, ಜಿಪಂ ಮಾಜಿ ಅಧ್ಯಕ್ಷ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಬಿಳಿಚೌಡಯ್ಯ, ಕಾರ್ಯದರ್ಶಿಗಳಾದ ಸುಬ್ರಮಣೈ, ಬಾಬು, ಹೇಮಂತ್ ಕುಮಾರ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವತ್ಸಲ ಶೇಖರಪ್ಪ, ಸೇರಿದಂತೆ ಜೆಡಿಎಸ್ ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Facebook Comments

Sri Raghav

Admin