ಕೋಲಾರದಲ್ಲಿ ಹೊಸ ಶಾಸಕರ ಅಲೆ..!

ಈ ಸುದ್ದಿಯನ್ನು ಶೇರ್ ಮಾಡಿ

kolara-new-mlas
ಕೋಲಾರ, ಮೇ 16-ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮೂವರು ಶಾಸಕರು ಹೊಸದಾಗಿ ಆಯ್ಕೆಯಾಗಿದ್ದಾರೆ. ಮಾಲೂರು, ಕೆಜಿಎಫ್ ಹಾಗೂ ಮುಳಬಾಗಿಲು ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನ ಕೆ.ವೈ.ನಂಜೇಗೌಡ, ರೂಪಾ ಶಶಿಧರ್ ಮತ್ತು ಪಕ್ಷೇತರ ಅಭ್ಯರ್ಥಿ ಎಚ್.ನಾಗೇಶ್ ಆಯ್ಕೆಯಾಗಿದ್ದಾರೆ.
ಮಾಲೂರು ಕ್ಷೇತ್ರದ ಕೆ.ವೈ.ನಂಜೇಗೌಡ ಅವರು ಗ್ರಾಪಂನಿಂದ ರಾಜಕಾರಣ ಪ್ರಾರಂಭಿಸಿ ಹಾಲಿ ಹಾಲು ಒಕ್ಕೂಟದ ನಿರ್ದೇಶಕರಾಗಿ ರಾಜಕೀಯ ಬಲ್ಲವರಾಗಿದ್ದಾರೆ.

ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ರೂಪಾ ಶಶಿಧರ್ ಅವರು ಸಂಸದ ಕೆ.ಎಚ್.ಮುನಿಯಪ್ಪ ಅವರ ಪುತ್ರಿಯಾಗಿದ್ದು, ರಾಜಕೀಯ ಬಲ್ಲವರಾಗಿದ್ದು, ಕಳೆದ ಜಿಪಂ ಚುನಾವಣೆಯಲ್ಲಿ ಪರಾಭವಗೊಂಡು ಹಾಲಿ ಬಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾಗೇಶ್ ಕ್ಷೇತ್ರಕ್ಕೆ ಹೊಸಮುಖವಾಗಿದ್ದು, ಬೆಸ್ಕಾಂ ಉದ್ಯೋಗಿಯಾಗಿದ್ದರೂ ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಅವರ ಕೃಪಾಪೋಷಣೆಯಲ್ಲಿ ಶಾಸಕರಾಗಿದ್ದಾರೆ ಹಾಗೂ ಡಿ.ಕೆ.ಶಿವಕುಮಾರ್‍ರವರ ಆಪ್ತರಾಗಿದ್ದಾರೆ.

ಕೋಲಾರ, ಶ್ರೀನಿವಾಸಪುರ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಶ್ರೀನಿವಾಸ್‍ಗೌಡ ಮತ್ತು ರಮೇಶ್‍ಕುಮಾರ್ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದವರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಸತತವಾಗಿ ಎರಡನೆ ಬಾರಿಗೆ ಆಯ್ಕೆಯಾಗುವುದಿಲ್ಲ ಎಂಬ ಅಪನಂಬಿಕೆ ಕಾಡುತ್ತಿತ್ತು. ಆದರೆ ಅದು ಸುಳ್ಳಾಗಿದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸೋತವರು ಮತ್ತೆ ಆಯ್ಕೆಯಾಗುವುದಿಲ್ಲ ಎಂಬ ಮಾತು ಕಾಡುತ್ತಿತ್ತು. ಇದಕ್ಕೆ ಶ್ರೀನಿವಾಸಗೌಡರು ತಿಲಾಂಜಲಿ ಹಾಡಿದ್ದಾರೆ. ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಎನ್.ನಾರಾಯಣಸ್ವಾಮಿ ಅವರು ಎರಡನೆ ಬಾರಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಒಂದು ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

Facebook Comments

Sri Raghav

Admin