ನಾಳೆ ಬೆಳಿಗ್ಗೆ 9:30ಕ್ಕೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿಲಿದ್ದಾರೆ ಯಡಿಯೂರಪ್ಪ

Yadiyurappa--01
ಬೆಂಗಳೂರು, ಮೇ 16: ನಾಳೆ ಬೆಳಿಗ್ಗೆ 9:30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.  ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಬಿಜೆಪಿಗೆ ಆಹ್ವಾನ ನೀಡಿದ್ದು, ನಾಳೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಅವರು ನಿಗದಿತ ಸಮಯದೊಳಗೆ ಬಹುಮತವನ್ನು ಸಾಬೀತು ಮಾಡಬೇಕಾಗುತ್ತದೆ ಇಲ್ಲದಲ್ಲಿ ಸರ್ಕಾರ ಬಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮೈತ್ರಿಗೆ ಅವಕಾಶ ದೊರೆಯುತ್ತದೆ.

ಡಿಜಿ-ಐಜಿಪಿ ನೀಲಮಣಿ ರಾಜು ಅವರು ಈಗಾಗಲೇ ಪೊಲಿಸ್ ಇಲಾಖೆಗೆ ಗುಪ್ತ ಆದೇಶ ರವಾನಿಸಿದ್ದು ಎಲ್ಲೆಡೆ ಬಿಗಿ ಬಂಧೋಬಸ್ತ್ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಬಿಜೆಪಿಯ ಶಾಸಕ ಸುರೇಶ್‌ ಕುಮಾರ್ ಅವರು ಫೇಸ್‌ಬುಕ್‌ ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದು ‘ನಾಳೆ, ಗುರುವಾರ ಬೆಳಿಗ್ಗೆ ೯.೩೦ ಗಂಟೆಗೆ ರಾಜಭವನದಲ್ಲಿ ಸನ್ಮಾನ್ಯ ಬಿ.ಎಸ್.ಯಡ್ಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಂತಸ ಗಳಿಗೆಯಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಸೇರೋಣ’ ಎಂದು ಅವರು ಬರೆದುಕೊಂಡಿದ್ದಾರೆ.

ಈ ಬಗ್ಗೆ ಬುಧವಾರ ರಾತ್ರಿ ಬಿಜೆಪಿ ಕಚೇರಿಯಲ್ಲಿ ಚಟುವಟಿಕೆ ಪ್ರಾರಂಭವಾಗಿದ್ದು, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು ಕಚೇರಿಯಲ್ಲಿ ಸೇರಿದ್ದು, ನಾಳೆ ಬೆಳಿಗ್ಗೆಯ ಪ್ರಮಾಣ ವಚನ ಸಮಾರಂಭದ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇತ್ತಕಡೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಇಂದೂ ಸಹ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಕೇಳಿದ್ದವು, ಆ ನಂತರ ಶಾಸಕರ ‘ಕುದುರೆ ವ್ಯಾಪಾರ’ಕ್ಕೆ ಹೆದರಿ ರೆಸಾರ್ಟ್‌ನತ್ತ ಮುಖ ಮಾಡಿದ್ದರು.
ಈ ಮಧ್ಯೆ ಸರಳ ಬಹುಮತಕ್ಕೆ ಅಗತ್ಯವಿರುವ ಶಾಸಕರನ್ನು ಕ್ರೋಢೀಕರಿಸುವ ಕಾರ್ಯಕ್ಕೆ ಬಿಜೆಪಿ ಕೈ ಹಾಕಿದೆ ಎನ್ನಲಾಗಿದೆ. ಕಾಂಗ್ರೆಸ್‍ನ ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಬಿ.ಕೆ.ಸಂಗಮೇಶ್, ವಿ.ಸಿ.ಪಾಟೀಲ್, ಶಿವಾನಂದ ಪಾಟೀಲ್, ಆನಂದ್‍ಸಿಂಗ್, ಗಣೇಶ್ ಹಾಗೂ ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್.ಪಿ.ನಾಗೇಶ್ ಅವರಿಗೆ ಬಿಜೆಪಿ ಗಾಳ ಹಾಕಿದ್ದು, ಈ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಗುವ ನಿರೀಕ್ಷೆಯಿದೆ ಎಂದು ಕೇಸರಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. ಈ ಮಧ್ಯೆ ಅಮರೇಗೌಡ ಬಯ್ಯಾಪುರ ಹಾಗೂ ವೆಂಕಟರಾವ್ ನಾಡಗೌಡ ಅವರು ಕೂಡ ಬಿಜೆಪಿ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಪಕ್ಷ ತೊರೆದು ಬರುವ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ನಡೆಯುವ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ವಿಶೇಷ ಪ್ಯಾಕೇಜ್ ನೀಡುವುದರ ಜತೆಗೆ ಎಲ್ಲ ಖರ್ಚು-ವೆಚ್ಚ ಭರಿಸಲು ಮತ್ತು ಗೆಲುವಿಗೆ ಸಹಕರಿಸಲು ಬಿಜೆಪಿ ಹೈಕಮಾಂಡ್ ಒಪ್ಪಿದೆ ಎಂದು ತಿಳಿದುಬಂದಿದೆ.  ಬಿಜೆಪಿ ಸಂಪರ್ಕದಲ್ಲಿರುವ ಕಾಂಗ್ರೆಸ್ ಶಾಸಕರೊಂದಿಗೆ ಅಮಿತ್ ಷಾ, ರಾಜ್ಯ ಉಸ್ತುವಾರಿಗಳಾದ ಮುರಳೀಧರರಾವ್ ಮತ್ತು ಪ್ರಕಾಶ್ ಜಾವ್ಡೇಕರ್ ಅವರು ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

104 ಸ್ಥಾನಗಳನ್ನು ಪಡೆದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡದೆ ಕೇವಲ 38 ಸ್ಥಾನ ಪಡೆದಿರುವ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಮುಂದಾಗಿರುವ ಕಾಂಗ್ರೆಸಿಗರ ಧೋರಣೆಯಿಂದ ಬೇಸತ್ತಿರುವ ಕೆಲ ಶಾಸಕರು ಬಿಜೆಪಿಯೊಂದಿಗೆ ಕೈ ಜೋಡಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin