ರಸ್ತೆ ವಿಭಜಕದ ಮೇಲೆ ಕುಳಿತ್ತಿದ್ದವರ ಮೇಲೆ ಹರಿದ ಟ್ರಕ್‍, ಐವರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Truck
ಜಲೌನ್(ಉ.ಪ್ರ.), ಮೇ 16-ರಸ್ತೆ ವಿಭಜಕದ (ರೋಡ್ ಡಿವೈಡರ್) ಮೇಲೆ ಕುಳಿತ್ತಿದ್ದ ಐವರು ಟ್ರಕ್‍ಗೆ ಬಲಿಯಾದ ಘಟನೆ ಉತ್ತರ ಪ್ರದೇಶದ ಕಾನ್ಪುರ-ಝಾನ್ಸಿ ರಾಷ್ಟ್ರೀಯ ಹೆದ್ದಾರಿಯ ಜಲೌನ್‍ನಲ್ಲಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇತರ ಮೂವರು ತೀವ್ರ ಗಾಯಗೊಂಡಿದ್ದಾರೆ. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರ ಗುಂಪೊಂದು ಕಾರಿನಲ್ಲಿ ಕಾನ್ಪುರದ ಬಿಥೂರ್‍ನಿಂದ ತೆರಳುತ್ತಿತ್ತು. ಕಾರಿನ ಚಕ್ರ ಪಂಕ್ಚರ್ ಆದ ಕಾರಣ ಟೈರ್ ಬದಲಿಸುತ್ತಿದ್ದಾಗ ಅವರು ರೋಡ್ ಡಿವೈಡರ್ ಮೇಲೆ ಕುಳಿತ್ತಿದ್ದರು. ಇದೇ ವೇಳೆ ಝಾನ್ಸಿಯಿಂದ ಟ್ರಕ್ಕೊಂದು ವೇಗವಾಗಿ ಬರುತ್ತಿತ್ತು. ರಸ್ತೆಗೆ ಅಡ್ಡವಾಗಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ, ಟ್ರಕ್ ನಿಯಂತ್ರಣ ತಪ್ಪಿ, ಡಿವೈಡರ್ ಮೇಲೆ ಕುಳಿತ್ತಿದ್ದವರಿಗೆ ಡಿಕ್ಕಿ ಹೊಡೆಯಿತು.

ಈ ದುರಂತದಲ್ಲಿ ಕವಿತಾ(8), ರಾಹುಲ್(26), ರಜನಿ(30), ರಾಮ್ ಭರಣ್(35) ಹಾಗೂ ಕೈಲಾಶ ದೇವಿ(30) ಮೃತಪಟ್ಟರು ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ಅಮರೇಂದ್ರ ಸಿಂಗ್ ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಟ್ರಕ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

Facebook Comments

Sri Raghav

Admin