ಸಿ.ಟಿ.ರವಿ ಹ್ಯಾಟ್ರಿಕ್ ಗೆಲುವು, ಶೃಂಗೇರಿ ಕಾಂಗ್ರೆಸ್ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

c-t-ravi-1

ಚಿಕ್ಕಮಗಳೂರು, ಮೇ 16- ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಐದು ವಿಧಾನಸಬಾ ಕ್ಷೇತ್ರದಲ್ಲಿ ನಾಲ್ಕು ಬಿಜೆಪಿ ಗೆದ್ದರೆ, ಶೃಂಗೇರಿ ಕೈ ವಶವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶಾಸಕ ಸಿ.ಟಿ.ರವಿ ಅವರು ಸತತ ನಾಲ್ಕನೆ ಬಾರಿ ಗೆಲುವಿನ ನಗೆ ಬೀರಿದ್ದಾರೆ. ತರೀಕೆರೆಯಲ್ಲಿ ಬಿಜೆಪಿಯ ಬಿ.ಎಸ್.ಸುರೇಶ್, ಕಡೂರಿನಲ್ಲಿ ಬೆಳ್ಳಿ ಪ್ರಕಾಶ್, ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಎಂ.ಪಿ.ಕುಮಾರಸ್ವಾಮಿ ಗೆಲುವು ಸಾಧಿಸಿದರೆ, ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ರಾಜೇಗೌಡ ಅಲ್ಪ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ಈ ಬಾರಿ ಜೆಡಿಎಸ್ ಖಾತೆ ತೆರೆದಿಲ್ಲ. ಜಿಲ್ಲೆಯಲ್ಲಿ 60 ಮಂದಿ ಕಣದಲ್ಲಿದ್ದು, ಅಂತಿಮವಾಗಿ ರಾಷ್ಟ್ರೀಯ ಪಕ್ಷಗಳು ಗೆಲುವಿನ ನಗೆ ಬೀರಿದವು. ಅಭ್ಯರ್ಥಿಗಳು ನೀರಾವರಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜನರಲ್ಲಿ ಮತ ಯಾಚಿಸಿದರು.  ಶಾಸಕ ಸಿ.ಟಿ.ರವಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಜನರು ಬಿಜೆಪಿಯನ್ನು ಕೈ ಹಿಡಿದಿದ್ದಾರೆ. ಬಿಜೆಪಿ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಮೆಡಿಕಲ್ ಕಾಲೇಜು, ನೀರಾವರಿಗೆ ನನ್ನ ಪ್ರಥಮ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದರು.

ತರೀಕೆರೆ ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಕ್ಷೇತ್ರದಲ್ಲಿ ಬರಗಾಲ ಕಾಡುತ್ತಿದೆ. ಸಮಗ್ರ ನೀರಾವರಿ ಯೋಜನೆ ಕಾರ್ಯಗತ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ. ರೈತರ ಹಿತ ಕಾಪಾಡಲು ಆದ್ಯತೆ ನೀಡುತ್ತೇನೆ ಎಂದರು. ಮೂಡಿಗೆರೆ ಶಾಸಕ ಕುಮಾರಸ್ವಾಮಿ ಮಾತನಾಡಿ, ನನ್ನ ಮೊದಲ ಆದ್ಯತೆ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಶ್ರಮ ವಹಿಸುತ್ತೇನೆ. ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಆದ್ಯತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಗುರಿ ಇಟ್ಟುಕೊಂಡಿದ್ದೇನೆ ಎಂದರು.

ಶೃಂಗೇರಿ ವಿಜೇತ ಅಭ್ಯರ್ಥಿ ರಾಜೇಗೌಡ ಮಾತನಾಡಿ, ಕಳೆದ ಬಾರಿ ಅಲ್ಪಮತಗಳಿಂದ ಸೋತಿದೆ. ಈ ಬಾರಿ ಕ್ಷೇತ್ರದ ಜನ ನನ್ನ ಕೈ ಹಿಡಿದಿದ್ದಾರೆ. ನನ್ನ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ನಿವಾರಿಸುತ್ತೇನೆ ಎಂದು ತಿಳಿಸಿದರು. ನಾನು ಜಿಪಂ ಅಧ್ಯಕ್ಷನಾಗಿದ್ದಾಗ ಸಮಸ್ಯೆಯ ಆಳವನ್ನು ಅರಿತಿದ್ದೇನೆ. ಪೂರ್ಣ ಅಭಿವೃದ್ಧಿ ಕಡೆಗೆ ಗಮನ ಕೊಟ್ಟು ಕೆಲಸ ಮಾಡುತ್ತೇನೆ ಎಂದರು.

ಕಡೂರಿನ ಬಿಜೆಪಿ ವಿಜೇತ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಮಾತನಾಡಿ, ಕಳೆದ 18 ವರ್ಷಗಳಿಂದ ರಾಜಕಾರಣದಲ್ಲಿದ್ದು, ಕ್ಷೇತ್ರದ ಒಡನಾಟ ಹೊಂದಿದ್ದು, ಜನ ನನ್ನನ್ನು ಗೆಲ್ಲಿಸಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಂಡು ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದರು. ಬಿಜೆಪಿ ನಾಲ್ಕು ಕ್ಷೇತ್ರ ಗೆದ್ದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೋದಿ ಅವರಿಗೆ ಜಯಘೋಷಗಳನ್ನು ಕೂಗಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin