ನೂತನ ಮುಖ್ಯಮಂತ್ರಿ ಯಡಿಯೂರಪ್ಪನವರ ಮುಂದಿದೆ ಬೆಟ್ಟದಂತಹ ಸವಾಲು..!

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-CM--02

ಬೆಂಗಳೂರು, ಮೇ 17- ರಾಜ್ಯದ 24ನೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳಲು 15 ದಿನಗಳೊಳಗೆ ಬಹುಮತ ಸಾಬೀತು ಪಡಿಸುವ ಬೆಟ್ಟದಂತಹ ಸವಾಲು ಎದುರಾಗಿದ್ದು, ಈ ಸವಾಲನ್ನು ಅವರು ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

222 ಸ್ಥಾನಗಳಲ್ಲಿ 104 ಸ್ಥಾನ ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಬಹುಮತ ಸಾಬೀತುಪಡಿಸಲು 112 ಸ್ಥಾನಗಳ ಅವಶ್ಯಕತೆ ಇದೆ. ರಾಣೆಬೆನ್ನೂರಿನಿಂದ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಆರ್.ಶಂಕರ್ ಮತ್ತು ಮುಳಬಾಗಿಲಿನ ಪಕ್ಷೇತರ ಅಭ್ಯರ್ಥಿ ನಾಗೇಶ್ ಅವರನ್ನು ಬಿಜೆಪಿಗೆ ಕರೆತರಲು ಹರಸಾಹಸ ನಡೆಸಲಾಗುತ್ತಿದೆ.

ಇಬ್ಬರು ಪಕ್ಷೇತರರನ್ನು ಬಿಜೆಪಿಗೆ ಕರೆತಂದರೂ ಬಹುಮತ ಸಾಬೀತಿಗೆ ಇನ್ನೂ ಆರು ಶಾಸಕರ ಕೊರತೆ ಎದುರಾಗಲಿದ್ದು, ಈ ಕೊರತೆಯನ್ನು ಬಿಜೆಪಿ ಯಾವ ರೀತಿ ನಿವಾರಿಸಿಕೊಳ್ಳುತ್ತದೆ ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಬಹುಮತ ಸಾಬೀತಿಗೆ ಅವಶ್ಯವಿರುವ ಸ್ಥಾನಗಳನ್ನು ಸರಿಹೊಂದಿಸಲು ಬಿಜೆಪಿಗೆ ಆಪರೇಷನ್ ಕಮಲ ನಡೆಸುವುದು ಅನಿವಾರ್ಯವಾಗಿದೆ.

ಬಿಜೆಪಿಗೆ ಬೆಂಬಲ ಸೂಚಿಸಿ ಪಕ್ಷ ತೊರೆದು ಬರುವ ಅನ್ಯ ಪಕ್ಷೀಯರಿಗೆ ಉಪಚುನಾವಣೆಯಲ್ಲಿ ಅಗತ್ಯ ನೆರವು ನೀಡುವುದು. ಸಚಿವ ಸ್ಥಾನ ಇಲ್ಲವೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಭರವಸೆ ನೀಡಲಾಗುತ್ತಿದೆ. ಒಂದು ವೇಳೆ ಆಪರೇಷನ್ ಕಮಲಕ್ಕೆ ಅನ್ಯ ಪಕ್ಷೀಯರು ಒಲವು ತೋರದಿದ್ದರೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅವಶ್ಯವಿರುವಷ್ಟು ವಿರೋಧ ಪಕ್ಷದ ಶಾಸಕರನ್ನು ಗೈರು ಹಾಜರಾಗುವಂತೆ ನೋಡಿಕೊಳ್ಳುವ ತಂತ್ರಕ್ಕೂ ಬಿಜೆಪಿ ಮೊರೆ ಹೋಗಿದೆ.

ಹಂಗಾಮಿ ಸಭಾಧ್ಯಕ್ಷರಾಗಿ ನೇಮಕಗೊಳ್ಳುವವರಿಂದ ಕೆಲ ಶಾಸಕರಿಗೆ ಪ್ರಮಾಣ ವಚನ ಬೋಧನೆ ಮಾಡದಿರುವ ಮೂಲಕ ಚಾಣಾಕ್ಷತನ ಪ್ರದರ್ಶಿಸುವ ಕಾರ್ಯಕ್ಕೂ ಬಿಜೆಪಿ ಕೈ ಹಾಕುವುದು ಅನಿವಾರ್ಯವಾಗಿದೆ. ಇದರ ಬೆನ್ನಲ್ಲೆ ಪ್ರಮಾಣ ವಚನ ಸ್ವೀಕಾರ ಕುರಿತಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದು ತಂತಿ ಮೇಲಿನ ನಡಿಗೆಯಂತಾಗಿದೆ.

ತಡರಾತ್ರಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಆದರೆ, ಸರ್ಕಾರ ರಚಿಸಲು ಬಿಜೆಪಿಯವರು ರಾಜ್ಯಪಾಲರಿಗೆ ನೀಡಿರುವ ಅಗತ್ಯ ದಾಖಲೆಗಳನ್ನು ನಾಳೆ ವೇಳೆಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ.
ಸರ್ಕಾರ ಸಲ್ಲಿಸುವ ದಾಖಲೆ ಆಧರಿಸಿ ಸರ್ವೋಚ್ಛ ನ್ಯಾಯಾಲಯ ನಾಳೆ ವಿಚಾರಣೆ ನಡೆಸುವುದರಿಂದ ಯಡಿಯೂರಪ್ಪ ಅವರು ಎಚ್ಚರಿಕೆಯ ಹೆಜ್ಜೆ ಇಡುವ ಅಗತ್ಯವಿದೆ.

ಶತಾಯ-ಗತಾಯ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಹಿಡಿಯಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಒಂದುಗೂಡಿದ್ದು, ತಮ್ಮ ಶಾಸಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ತಂತ್ರ ರೂಪಿಸಿದೆ. ಈ ಎಲ್ಲ ತಂತ್ರಗಳಿಗೂ ಬಿಜೆಪಿ ಪ್ರತಿತಂತ್ರ ಹೂಡಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಸರ್ಕಾರವನ್ನು ಉಳಿಸಿಕೊಳ್ಳುವುದೋ ಅಥವಾ ಕಳೆದುಕೊಳ್ಳುವುದೋ ಎನ್ನುವುದು ಕುತೂಹಲ ಕೆರಳಿಸಿದೆ.

Facebook Comments

Sri Raghav

Admin