ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ಸಾಧ್ಯವೇ ಇಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Politics-04

ಬೆಂಗಳೂರು, ಮೇ 16 -ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ಕಾರಣಕ್ಕೂ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಮುಂದೆ ಗಾಂಧಿ ಪ್ರತಿಮೆ ಬಳಿ ಶಾಸಕರ ಜತೆಗೂಡಿ ಪ್ರತಿಭಟನೆ ನಡೆಸುತ್ತಿದ್ದ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟು 117 ಸಂಖ್ಯಾ ಬಲ ಹೊಂದಿದೆ. ಅದಕ್ಕೆ ವಿರುದ್ಧವಾಗಿ 104 ಸ್ಥಾನ ಹೊಂದಿರುವ ಬಿಜೆಪಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿರುವುದು ಸಂವಿಧಾನ ವಿರೋಧಿಯಾಗಿದೆ ಎಂದರು.

ಯಾವುದೇ ಕಾರಣಕ್ಕೂ ಬಿಜೆಪಿಯವರು ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ. ವಿಧಾನಸೌಧದಲ್ಲಿ ವಿಶ್ವಾಸ ಮತ ಯಾಚನೆ ವೇಳೆ ಅವರಿಗೆ ನಿರಾಸೆಯಾಗಲಿದೆ ಎಂದರು. ಸುಪ್ರೀಂಕೋರ್ಟ್‍ನಲ್ಲಿ ನಾವು ದಾಖಲಿಸಿರುವ ಪ್ರಕರಣ ಸೂಕ್ತವಾಗಿದೆ. ಕಾನೂನು ಪ್ರಕಾರ ವಿಚಾರಣೆ ನಡೆದು ಸೂಕ್ತ ನಿರ್ಣಯ ಹೊರ ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ಮತ ಯಾಚನೆ ವೇಳೆ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿರುವುದು ಅವರ ಬಂಡತನ ಎಂದರು. ಕಾಂಗ್ರೆಸ್‍ನ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ. ಆನಂದ್‍ಸಿಂಗ್ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದಾರೆ. ಅವರು ವಾಪಸ್ ಬಂದೇ ಬರುತ್ತಾರೆ. ಪ್ರತಾಪ್ ಗೌಡ ಪಾಟೀಲ್ ಅನಾರೋಗ್ಯದಿಂದಿದ್ದಾರೆ. ಅವರು ಕಾಂಗ್ರೆಸ್‍ನಲ್ಲೇ ಇದ್ದಾರೆ ಎಂದು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

Facebook Comments