ಸಹಕಾರಿ-ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 1ಲಕ್ಷದವರೆಗಿನ ಸಾಲ ಮನ್ನಾ ಭರವಸೆ ನೀಡಿದ ಬಿಎಸ್ವೈ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-CM--11

ಬೆಂಗಳೂರು, ಮೇ 17- ಸಹಕಾರಿ ಬ್ಯಾಂಕುಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವ ರೈತರ ಒಂದು ಲಕ್ಷದವರೆಗಿನ ಬೆಳೆ ಸಾಲ ಮನ್ನಾ ಮಾಡುವ ಭರವಸೆ ನೀಡಿದ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ, ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಇನ್ನೆರಡು ದಿನದಲ್ಲಿ ಪ್ರಕಟಿಸುವುದಾಗಿ ಘೋಷಿಸಿದರು.  ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ಸಂಪುಟ ಸಭೆ ನಡೆಸಿ ಒಂದೂವರೆ ಗಂಟೆಯಲ್ಲಿ ರೈತರ ಬೆಳೆ ಸಾಲ ಮನ್ನಾ ವಿಷಯ ಪ್ರಸ್ತಾಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಬೆಳೆ ಸಾಲ ಮನ್ನಾ ಹಾಗೂ ನೇಕಾರರ ಸಾಲ ಮನ್ನಾ ಮಾಡುವ ಭರವಸೆಯನ್ನು ಚುನಾವಣಾ ಪೂರ್ವದಲ್ಲಿ ನೀಡಿದ್ದೆ.

ಅದರಂತೆ ಅವರೆಲ್ಲರ ಸಾಲ ಮನ್ನಾ ಮಾಡುವ ಸಂಬಂಧ ಮಾಹಿತಿ ನೀಡುವಂತೆ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ. ಅವರು ಇಂದು ಅಥವಾ ನಾಳೆಯೊಳಗೆ ಮಾಹಿತಿ ನೀಡಲಿದ್ದಾರೆ. ನಂತರ ಘೋಷಣೆ ಮಾಡುತ್ತೇನೆ ಎಂದರು. ಶೇ.100ಕ್ಕೆ ನೂರರಷ್ಟು ವಿಶ್ವಾಸ ಮತಗಳಿಸುವ ವಿಶ್ವಾಸವಿದೆ ಎಂದ ಅವರು, ಜನಾದೇಶ ಬಿಜೆಪಿ ಹಾಗೂ ನನ್ನ ಪರವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನೈತಿಕ ಮೈತ್ರಿ ಮೂಲಕ ಸರ್ಕಾರ ರಚನೆಗೆ ಮುಂದಾಗಿವೆ ಎಂದು ಆರೋಪಿಸಿದರು.

ಜನಾದೇಶ ಒಪ್ಪುವ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕರು ಕೂಡ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಲಿದ್ದಾರೆ. 60ರ ದಶಕದಲ್ಲಿ ಇಂದಿರಾಗಾಂಧಿ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಆತ್ಮಸಾಕ್ಷಿ ಮತಯಾಚಿಸಿ ಯಶಸ್ವಿಯಾಗಿದ್ದರು. ಅದರಂತೆ ನಾನೂ ಆತ್ಮಸಾಕ್ಷಿಯಾಗಿ ಮತ ನೀಡುವಂತೆ ಕೇಳುತ್ತೇನೆ. ಅದರಲ್ಲಿ ಯಶಸ್ವಿಯಾಗುತ್ತೇನೆ ಎಂದರು. ಈ ವಿಷಯ ಸದ್ಯ ನ್ಯಾಯಾಲಯದಲ್ಲಿದ್ದು, ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಅಪ್ರಸ್ತುತ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯದ ಮತದಾರರು, ದೀನದಲಿತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಮುಖ್ಯಮಂತ್ರಿಯಾಗುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ ಅವರು, ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ಮಾಡುವ ಮೂಲಕ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ. ಆ ಕಾರ್ಯಕ್ರಮದಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯದ ಮುಖ್ಯಮಂತ್ರಿಗಳು, ನಮ್ಮ ಪಕ್ಷದ ವರಿಷ್ಠರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin