ಕದನ ವಿರಾಮ ಉಲ್ಲಂಘಿಸಿ ಪಾಕ್ ಫೈರಿಂಗ್ : ಬಿಎಸ್‍ಎಫ್ ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Pakistan-Firing
ಜಮ್ಮು, ಮೇ 18- ಕಾಶ್ಮೀರದ ಇಂಡೋ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ(ಐಬಿ)ಯಲ್ಲಿ ಪಾಕ್ ಸೇನೆ ಮತ್ತೆ ಪುಂಡಾಟ ಮೆರೆದಿದೆ. ಕದನ ವಿರಾಮ ಉಲ್ಲಂಘಿಸಿ ಪಾಕಿ ಯೋಧರು ಇಂದು ಮುಂಜಾನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಘಟನೆಯಲ್ಲಿ ಬಿಎಸ್‍ಎಫ್ ಅಧಿಕಾರಿ ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಾಳೆ ಕಾಶ್ಮೀರಕ್ಕೆ ಭೇಟಿ ನೀಡುವ ಮುನ್ನಾ ದಿನವಾದ ಇಂದು ಪಾಕಿಸ್ತಾನ ಶೆಲ್ ದಾಳಿ ನಡೆಸಿ ಆತಂಕದ ವಾತಾವರಣ ಸೃಷ್ಟಿಸಿದೆ.

ಜಾರ್ಖಂಡ್‍ನ ಗಿರಿಧ್‍ನ ಸೀತಾರಾಮ್ ಉಪಾಧ್ಯಾಯ(28) ಹುತಾತ್ಮರಾದ ಬಿಎಸ್‍ಎಫ್ ಯೋಧ. ಅವರು 2011ರಲ್ಲಿ ಸೇನಾಪಡೆಗೆ ಸೇರಿದ್ದರು. ಮೇ 16 ಮತ್ತು 17ರ ಮಧ್ಯರಾತ್ರಿ ಹೀರಾನಗರ್ ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‍ಎಫ್ ಯೋಧರೊಬ್ಬರು ಗಾಯಗೊಂಡಿದ್ದರು. ನಿನ್ನೆ ರಾತ್ರಿಯಂದ ಅರ್ನಿಯಾ ಸೆಕ್ಟರ್‍ನಲ್ಲಿ ಪಾಕ್ ಯೋಧರು ಮತ್ತೆ ಫೈರಿಂಗ್ ಆರಂಭಿಸಿದರು.

ಇಂದು ಮುಂಜಾನೆ ಬಿಎಸ್‍ಎಫ್ ಕಾನ್ಸ್‍ಟೆಬಲ್ ಸೀತಾರಾಮ್ ಉಪಾಧ್ಯಾಯ ಹುತಾತ್ಮರಾದರು. ಪಾಕಿಸ್ತಾನದ ಉದ್ಧಟತನಕ್ಕೆ ಬಿಎಸ್‍ಎಫ್ ಅಧಿಕಾರಿ ಸೇರಿ ಕೆಲವು ನಾಗರಿಕರೂ ಗಾಯಗೊಂಡಿದ್ದಾರೆ. ಕೆಲವು ಹಳ್ಳಿಗಳ ಮನೆಗಳು ಜಖಂಗೊಂಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುದ್ಧ ವಿರಾಮ ಉಲ್ಲಂಘಿಸಿ ಪಾಕ್ ಸೈನಿಕರು ನಡೆಸಿದ ಅಪ್ರಚೋದಿತ ಷೆಲ್ ಮತ್ತು ಗುಂಡಿನ ದಾಳಿಗೆ ಭಾರತೀಯ ಯೋಧರೂ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin