ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ನೀಡಿದ ಸೂಚನೆ ಸ್ವಾಗತಿಸಿದ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

Congress--01

ಬೆಂಗಳೂರು, ಮೇ 18- ಕರ್ನಾಟಕದ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಬ್ ನಬಿ ಆಜಾದ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು, ಸುಪ್ರೀಂಕೋರ್ಟ್‍ನ ತೀರ್ಪು ಕರ್ನಾಟಕದ ಇತಿಹಾದಲ್ಲಿ ನ್ಯಾಯವನ್ನು ಎತ್ತಿ ಹಿಡಿದಂತಾಗಿದೆ. ಕೇಂದ್ರ ಸರ್ಕಾರ ನೇಮಿಸಿದ ರಾಜ್ಯಪಾಲರ ಪೈಕಿ ಕೆಲವರು ಸಂವಿಧಾನಕ್ಕೆ ವಿರುದ್ಧವಾಗಿ ಪಕ್ಷಪಾತಿಗಳಾಗಿ ನಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದ ರಾಜ್ಯಪಾಲರು ಅದೇ ರೀತಿ ನಡೆದುಕೊಂಡಿದ್ದಾರೆ. ನಮಗೆ 117 ಸಂಖ್ಯಾಬಲವಿದ್ದರೂ ದೊಡ್ಡ ಪಕ್ಷ ಎಂಬ ಕಾರಣಕ್ಕಾಗಿ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿರುವುದು ಅಸಂವಿಧಾನಿಕ ಎಂದರು.

ಗೋವಾ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯಕ್ಕೆ ಒಂದು ನ್ಯಾಯ, ಕರ್ನಾಟಕಕ್ಕೆ ಒಂದು ನ್ಯಾಯ ಎಂಬಂತೆ ರಾಜ್ಯಪಾಲರ ನಿರ್ಧಾರವಿತ್ತು. ಈಗ ಸುಪ್ರೀಂಕೋರ್ಟ್ ಉತ್ತಮ ತೀರ್ಪು ನೀಡಿದ್ದು, ಯಡಿಯೂರಪ್ಪ ಬಹುಮತ ಸಾಬೀತು ಪಡಿಸುವವರೆಗೂ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಸ್ಪೀಕರ್ ಚುನಾವಣೆ ನಂತರವೇ ವಿಶ್ವಾಸಮತಯಾಚನೆಯಾಗಬೇಕು. ಯಾವುದೇ ಶಾಸಕರನ್ನು ಸಚಿವರನ್ನಾಗಿ ನೇಮಿಸುವಂತಿಲ್ಲ ಎಂಬ ಮಹತ್ವದ ತೀರ್ಮಾನಗಳನ್ನು ನೀಡಿದೆ. ಹೀಗಾಗಿ ಸುಪ್ರೀಂಕೋರ್ಟ್‍ನ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಮಾತನಾಡಿ, ರಾಜ್ಯಪಾಲರು ಕೇಂದ್ರ ಮತ್ತು ಬಿಜೆಪಿಯ ಬಾಲಬುಡಕರಂತೆ ಕೆಲಸ ಮಾಡಿದರು. ಪಕ್ಷಪಾತಿಯಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಿಟ್ಲರ್‍ನ ಪಳೆಯುಳಿಕೆಗಳಂತೆ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರು ನಡೆದಿದ್ದೇ ದಾರಿ ಎಂಬಂತಾಗಿದೆ. ಇದಕ್ಕೆ ಸುಪ್ರೀಂಕೋರ್ಟ್ ತಕ್ಕ ಪಾಠ ಕಲಿಸಿದ್ದು, ಬಿಜೆಪಿಗೆ ಕಪಾಳಮೋಕ್ಷ ಮಾಡಿದೆ ಎಂದು ಹೇಳಿದರು. ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ವೇಣುಗೋಪಾಲ್, ಶಾಸಕರಾದ ಜಮೀರ್ ಅಹಮ್ಮದ್‍ಖಾನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Facebook Comments

Sri Raghav

Admin