ರಾಜ್ಯಪಾಲರ ನಿರ್ಣಯ ಖಂಡಿಸಿ ಕಾಂಗ್ರೆಸ್‍ ನಾಯಕರಿಂದ ರಾಜಭವನ ಚಲೋ

ಈ ಸುದ್ದಿಯನ್ನು ಶೇರ್ ಮಾಡಿ

Congress-Rajabhavan-Chalo

ಬೆಂಗಳೂರು, ಮೇ 18- ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ ರಾಜ್ಯಪಾಲರ ನಿರ್ಣಯವನ್ನು ಖಂಡಿಸಿ ಕಾಂಗ್ರೆಸ್‍ನ ಹಿರಿಯ ನಾಯಕರ ನೇತೃತ್ವದಲ್ಲಿ ಇಂದು ರಾಜಭವನ ಚಲೋ ನಡೆಸಲಾಯಿತು.  ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಬ್ ನಬಿ ಆಜಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಸಿದ್ದರು.  ಕೆಪಿಸಿಸಿ ಕಚೇರಿಯಲ್ಲಿ ಸಮಾವೇಶಗೊಂಡ ಸಾವಿರಾರು ಕಾರ್ಯಕರ್ತರು ಕಾಲ್ನಡಿಗೆ ಮೂಲಕ ರಾಜಭವನದವರೆಗೂ ರ್ಯಾಲಿ ನಡೆಸಿದರು. ಆದರೆ, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಇಂಡಿಯನ್‍ಎಕ್ಸ್‍ಪ್ರೆಸ್ ವೃತ್ತದ ಬಳಿಯೇ ಕಾಂಗ್ರೆಸ್ ರ್ಯಾಲಿಯನ್ನು ತಡೆದರು.

ರಾಜಭವನದವರೆಗೆ ರ್ಯಾಲಿ ಹೋಗಲು ಅವಕಾಶ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಆದರೆ, ಭದ್ರತೆಯ ದೃಷ್ಟಿಯಿಂದ ಪೊಲೀಸರು ಅವಕಾಶವನ್ನು ನಿರಾಕರಿಸಿದರು. ಈ ಹಂತದಲ್ಲಿ ಪೊಲೀಸರು ಮುಖಡರಾದ ರಾಮಲಿಂಗಾರೆಡ್ಡಿ ಹಾಗೂ ಇತರರನ್ನು ತಮ್ಮ ವಶಕ್ಕೆ ಪಡೆದು ಕರೆದೊಯ್ದುರು. ಮಲ್ಲಿಕಾರ್ಜುನ ಖರ್ಗೆ, ಗುಲಾಬ್‍ನಬಿ ಆಜಾದ್, ಅಶೋಕ್ ಗೆಲ್ಹೋಟ್, ಬಿ.ಕೆ.ಹರಿಪ್ರಸಾದ್ ಅವರು ಇಂಡಿಯನ್ ಎಕ್ಸ್‍ಪ್ರೆಸ್ ವೃತ್ತದ ಬಳಿಯೇ ಪ್ರತಿಭಟನೆ ನಡೆಸಿದರು.

ತಡವಾಗಿ ಬಂದು ಪ್ರತಿಭಟನೆಗೆ ಸೇರಿಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲಾ ಹಿರಿಯ ನಾಯಕರ ಜತೆಗೂಡಿ ಇಂಡಿಯನ್ ಎಕ್ಸ್‍ಪ್ರೆಸ್‍ನಿಂದ ಕೆಪಿಸಿಸಿ ಕಚೇರಿ ವರೆಗೆ ಪಾದಯಾತ್ರೆಯಲ್ಲೇ ವಾಪಸ್ ಬಂದರು. ಈ ಸಂದರ್ಭದಲ್ಲಿ ಕ್ವೀನ್ಸ್‍ರಸ್ತೆ, ಇನ್‍ಫೆಂಟ್ರಿರಸ್ತೆ, ಶಿವಾಜಿನಗರದ ಮುಖ್ಯರಸ್ತೆಗಳು ಸಂಚಾರ ದಟ್ಟಣೆಯಿಂದ ಅಸ್ತವ್ಯಸ್ತವಾದವು. ಸಿದ್ದರಾಮಯ್ಯ ಅವರು ಪಾದಯಾತ್ರೆಗೆ ಬಂದಾಗ ಅವರೊಂದಿಗೆ ಸಾವಿರಾರು ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗುತ್ತಾ ಕೆಪಿಸಿಸಿ ಕಚೇರಿವರೆಗೂ ಕಾಲ್ನಡಿಗೆಯಲ್ಲೇ ಬಂದರು.

ಕಾಂಗ್ರೆಸ್ ರ್ಯಾಲಿಯಲ್ಲಿ ರಾಜ್ಯಪಾಲರ ವಿರುದ್ಧ ಧಿಕ್ಕಾರಗಳ ಘೋಷಣೆಗಳು ಮೊಳಗಿದವು. ಸಾಂವಿಧಾನಿಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಬಹುಮತ ಇಲ್ಲದೇ ಇದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವುದು, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿರುವುದು ಅಸಂವಿಧಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

Facebook Comments

Sri Raghav

Admin