ಸಿಎಂ ಯಡಿಯೂರಪ್ಪ ಮನೆಗೆ ಸಿಎಸ್ ರತ್ನಪ್ರಭಾ, ಡಿಜಿ ನೀಲಮಣಿ ಭೇಟಿ ನೀಡಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--0101

ಬೆಂಗಳೂರು ,ಮೇ18-ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ. ಎನ್ ರಾಜು ಸೇರಿದಂತೆ ಮತ್ತಿತರ ಅಧಿಕಾರಿಗಳು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.  ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ಬೆಳಗ್ಗೆ ಆಗಮಿಸಿದ ರತ್ನಪ್ರಭಾ ಮತ್ತು ನೀಲಮಣಿ ರಾಜು ಅವರುಗಳು ಅರ್ಧಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿ ಹಣಕಾಸಿನ ಪರಿಸ್ಥಿತಿ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.

ರಾಷ್ಟ್ರೀಯ ಬ್ಯಾಂಕ್, ಸಹಕಾರಿ ಬ್ಯಾಂಕ್ ಹಾಗೂ ನೇಕಾರರ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡುವ ಬಗ್ಗೆ ಹಣಕಾಸಿನ ಸ್ಥಿತಿಗತಿ ಕುರಿತಂತೆ ಮಾಹಿತಿ ನೀಡಬೇಕೆಂದು ನಿನ್ನೆ ಬಿಎಸ್‍ವೈ ಸೂಚಿಸಿದ್ದರು. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಹಕಾರಿ ಸಂಘಗಳಿಂದ ರೈತರು ಪಡೆದಿದ್ದ 50 ಸಾವಿರ ರೂ. ಸಾಲವನ್ನು ಸಿದ್ದರಾಮಯ್ಯ ಮನ್ನಾ ಮಾಡಿದ್ದರು.

ಹಿಂದಿನ ಸರ್ಕಾರ ಎಷ್ಟು ಹಣವನ್ನು ಪಾವತಿಸಿದೆ. ಬಾಕಿ ಇರುವ ಮೊತ್ತ , ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್‍ಗಳಿಂದ ರೈತರ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿದರೆ ಬೊಕ್ಕಸದ ಮೇಲೆ ಉಂಟಾಗುವ ಹೊರೆ ಇತ್ಯಾದಿಗಳ ಬಗ್ಗೆಯೂ ಮುಖ್ಯ ಕಾರ್ಯದರ್ಶಿಗಳಿಂದ ವಿವರ ಪಡೆದರು.  ಸಾಲಮನ್ನಾ ಮಾಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆಯೇ ಇದನ್ನು ಯಾವ ರೀತಿ ಸರಿದೂಗಿಸಬೇಕು, ಸಂಪನ್ಮೂಲ ಕ್ರೋಢೀಕರಣ ಇತ್ಯಾದಿ ವಿಷಯಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಸಂಜೆಯೊಳಗೆ ಆರ್ಥಿಕ ಇಲಾಖೆಯ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಗ್ರ ವಿವರ ನೀಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆಯ ಬಗ್ಗೆಯೂ ಚರ್ಚೆ:
ಇನ್ನು ರಾಜ್ಯದ ಸುವ್ಯವಸ್ಥೆ ಬಗ್ಗೆಯೂ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಜೊತೆಯೂ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ವಿಶ್ವಾಸ ಮತ ಯಾಚನೆ ವೇಳೆ ಪ್ರತಿಪಕ್ಷಗಳು ಸದನದೊಳಗೆ ಗಲಭೆ ಎಬ್ಬಿಸಬಹುದೇ, ಇದರಿಂದ ಉಂಟಾಗವ ದುಷ್ಪರಿಣಾಮಗಳು, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಸೇರಿದಂತೆ ಗೃಹ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಸರ್ಕಾರ ರಚನೆಯಾದ ಮೇಲೆ ಯಾವ ಯಾವ ಭಾಗದಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿವೆ, ಗುಪ್ತಚರ ಇಲಾಖೆ ಬಲಪಡಿಸುವುದು, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೇರಿದಂತೆ ಮತ್ತಿತರ ಮಾಹಿತಿ ಪಡೆದರು.

ಸಂದೀಪ್ ಪಾಟೀಲ್ ಜೊತೆ ಚರ್ಚೆ:
ಇನ್ನು ನಿನ್ನೆಯಷ್ಟೇ ಗುಪ್ತಚರ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಡಿಐಜಿ ಸಂದೀಪ್ ಪಾಟೀಲ್ ಕೂಡ ಬಿಎಸ್‍ವೈ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದರು. ಹೊರ ರಾಜ್ಯಕ್ಕೆ ತೆರಳಿರುವ ಶಾಸಕರು ಯಾವ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ, ಅನ್ಯ ಪಕ್ಷಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಸೇರಿದಂತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದರು. ಕ್ಷಣ ಕ್ಷಣಕ್ಕೂ ಮಾಹಿತಿ ನೀಡಬೇಕೆಂದು ಯಡಿಯೂರಪ್ಪ, ಸಂದೀಪ್ ಪಾಟೀಲ್‍ಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin