ಅನ್ನ ಎಸೆಯುವ ಮುನ್ನ ತಿಳಿಯರಿ ಹಸಿವಿನ ಮಹತ್ವವನ್ನ..!

ಈ ಸುದ್ದಿಯನ್ನು ಶೇರ್ ಮಾಡಿ

anna-arti-1

ಅನ್ನವೆಂದರೆ ಮನುಷ್ಯನ ಜೀವ ಧಾತು, ಜೀವಧ್ವನಿ. ಪುರಾಣ ಮಹಾಕಾವ್ಯಗಳಲ್ಲಿ ಇದು ಉಲ್ಲೇಖವಾಗಿದೆ. ದಾನಗಳಲ್ಲಿ ಅನ್ನದಾನ ಶ್ರೇಷ್ಠ ಎನ್ನುತ್ತಾರೆ. ರೋಗ ನಿರೋಧಕ ಶಕ್ತಿಯು ಅನ್ನ ಎಂಬ ಅಗುಳಿನಲ್ಲಿದೆ. ದಿನವೂ ಅನ್ನ ಊಟ ಮಾಡುವವರನ್ನು ಶ್ರೀಮಂತರೆಂದು ಪರಿಗಣಿಸಲಾಗುತ್ತದೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಎಲ್ಲರೂ ಸಂಪಾದಿಸುವುದು ಒಂದಿಷ್ಟು ಹೊಟ್ಟೆ ತುಂಬಿಕೊಳ್ಳುವುದಕ್ಕಾಗಿ ಅಲ್ಲವೇ..?

anna-arti-3

ಒಂದು ಅನ್ನದ ಅಗುಳಿನ ಮಹತ್ವ ಹಸಿದವನಿಗಷ್ಟೇ ಗೊತ್ತು. ಅನ್ನ ತಿನ್ನುವ ಹಕ್ಕಿದೆ. ಆದರೆ, ಬಿಸಾಡುವ ಹಕ್ಕು ನಮಗಿಲ್ಲ. ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಅಲ್ಲವೇ..? ತಿನ್ನುವ ಪ್ರತಿ ಕಾಳಿನ ಮೇಲೆ ತಿನ್ನುವವನ ಹೆಸರು ಬರೆದಿದೆ. ಇಂದು ಮನುಷ್ಯನ ಹೊಟ್ಟೆ ಸೇರುವ ಅನ್ನ ಕಸದ ತೊಟ್ಟಿ ಸೇರುತ್ತಿರುವುದು ವಿಷಾದದ ಸಂಗತಿ. ಅಕ್ಕಿ ಉಳಿದರೆ ಇಂದಲ್ಲ ನಾಳೆ ತಿನ್ನಬಹುದು. ನಾವು ಮಾಡಿದ ಅನ್ನ ನಾಶವಾಗಿ. ಹಾಳಾಗಿ ಹೋಗುತ್ತದೆ.  ದೊಡ್ಡ ಕಾರ್ಯಕ್ರಮಗಳಲ್ಲಿ ಮೊದ ಮೊದಲು ಮುಂಚಿತವಾಗಿ ಅನ್ನ ಬಸಿದು ಯಾರೂ ಊಟ ಮಾಡಲಾರದಂತೆ ಆಗುತ್ತಿದೆ. ನಮಗೆಷ್ಟು ಬೇಕು ಅಷ್ಟೇ ಬಳಸಬೇಕು. ಅನ್ನದ ಬಗ್ಗೆ ಪ್ರಾಮುಖ್ಯತೆ ಇರಬೇಕು. ಅನ್ನ ಪರಬ್ರಹ್ಮ ವಸ್ತು. ಪ್ರತಿಯೊಂದು ಅಗುಳಿಗೂ ಜೀವ ನೀಡುವ ಶಕ್ತಿಯಿದೆ. ಪ್ರತಿ ಅನ್ನದ ಅಗುಳು ತಿಪ್ಪೆ ಸೇರದಿರಲಿ. ಜನರ ನಿರ್ಲಕ್ಷ್ಯ ಭಾವನೆಯಿಂದ ದೇಶದಲ್ಲಿ ಲಕ್ಷಾಂತರ ಟನ್ ಅನ್ನ ಕಸದ ಗಟಾರ ಸೇರುತ್ತಿದೆ.

anna-arti-4

ಅನ್ನಕ್ಕಾಗಿ ಪರದಾಡುವ ಲಕ್ಷಾಂತರ ಬಡ ಜನರಿದ್ದಾರೆ. ಅನ್ನದ ಮಹತ್ವ ಎಲ್ಲರಿಗೂ ಮನದಟ್ಟಾಗಬೇಕು. ಸೇವಿಸುವ ಪ್ರತಿಯೊಂದು ಪದಾರ್ಥಗಳನ್ನು ನಾವು ನೀವೆಲ್ಲರೂ ಗೌರವಿಸಬೇಕು. ಆಗ ಅದು ನಮ್ಮನ್ನು ಗೌರವಿಸುತ್ತದೆ. ಬೆವರು ಸುರಿಸಿ ಬೆಳೆದ ಬೆಳೆಗೆ ಬೆಲೆ ಕಟ್ಟಲು ಅಸಾಧ್ಯ. ಇಂದು ರೈತ ಕಷ್ಟಪಟ್ಟು ಬೆವರು ಸುರಿಸಿ ರಕ್ತ ಚೆಲ್ಲಿ ಭತ್ತ ಬೆಳೆಯುತ್ತಾನೆ. ಅದನ್ನು ಬಿಸಾಕಿ ಅವನಿಗೆ ಅವಮಾನ ಮಾಡುವುದು ಸರಿಯಲ್ಲ.  ಹೊಲದಲ್ಲಿ ಬಡ ರೈತ ಮಹಿಳೆಯರು ಸೊಂಟ ಬಗ್ಗಿದರೆ, ಶ್ರೀಮಂತರ ಮನೆಯಲ್ಲಿ ಮನರಂಜನೆಯ ಕಾರ್ಯಕ್ರಮಗಳಿಗೆ ಎಥೇಚ್ಛವಾಗಿ ಊಟಕ್ಕಾಗಿ ಹಣ ವೆಚ್ಚ ಮಾಡುತ್ತಾರೆ. ಊಟ ಎಲ್ಲಿ ಇರುತ್ತೋ ಅಲ್ಲಿ ಜನ ಇದ್ದೇ ಇರುತ್ತಾರೆ. ಜತೆಗೆ ಅಲ್ಲಿ ಅನ್ನ ಹೆಚ್ಚಾಗಿ ಹೊರಹಾಕುವುದೂ ಸಾಮಾನ್ಯ.

anna-arti

ಮುಗಿಬಿದ್ದ ಜನ ತಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನ್ನ ಬಡಿಸಿಕೊಂಡು ಹೊಟ್ಟೆ ತುಂಬಿದಲ್ಲಿ ಕಸದ ರಾಶಿಗೆ ಚೆಲ್ಲುವುದಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ಅನ್ನ ದೇವತೆಯನ್ನು ಕಸದ ರಾಶಿ ಮಾಡುವುದು ಬೇಡ. ಅನ್ನ ಇಲ್ಲದೆ ಭಿಕ್ಷೆ ಬೇಡುತ್ತಾ ಅತ್ತು-ಅತ್ತು ಸುಸ್ತಾಗಿ ಮಲಗುವ ಬಡ ಮಕ್ಕಳು ಎಷ್ಟಿಲ್ಲ. ಅವರ ಗೋಳು, ಯಾತನೆ ಎಂತಹ ಕಷ್ಟ ಅನುಭವಿಸುತ್ತಾರೆ. ಅಂತವರಿಗಾದರೂ ಅನ್ನ ನೀಡಿದರೆ ಅವರ ಹಸಿವು ನೀಗುವುದಿಲ್ಲವೆ..? ಹೊಟ್ಟೆ ತುಂಬ ತಿನ್ನಬೇಕು. ಆದರೆ, ರಸ್ತೆ ತುಂಬಾ ಚೆಲ್ಲುವಷ್ಟು ಎಸೆಯಬಾರದು. ಅಗತ್ಯಕ್ಕಿಂತ ಅಧಿಕ ಅನ್ನ ಬಡಿಸಿಕೊಂಡು ತಿಪ್ಪೆಗೆ ಎಸೆಯುವುದು ಪಾಪದ ಕೆಲಸ. ಕೆಡಿಸಲಾರದ ಅನ್ನ, ಉಳಿದ ಆಹಾರ ಉಳಿದವರಿಗೆ ಆಗುವುದು ಉಪಹಾರ. ಹಾಳು ಮಾಡಿದ ಅನ್ನ ಒಬ್ಬನ ಹೊಟ್ಟೆ ತುಂಬುವುದಲ್ಲವೇ..? ಇದನ್ನು ನಾವು ಆಲೋಚಿಸಬೇಕು.  ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯ ಇತ್ಯಾದಿ ಹಲವು ಕಾರಣಗಳಿಂದ ಆಹಾರ ಉತ್ಪನ್ನ ಕುಂಠಿತವಾಗಿದೆ. ಜೇಬಿನಲ್ಲಿ ಕುಣಿಯುವ ಹಣದ ಮೇಲಿನ ಮೋಹ ಕಡಿಮೆಯಾದಾಗ ವಾಸ್ತವದ ಅರಿವಾಗಬಲ್ಲದು.

ಒಂದು ಅನ್ನದ ಅಗುಳಿನ ಉಳಿತಾಯ ನೂರು ಅಗುಳುಗಳ ಉತ್ಪಾದನೆಗಿಂತಲೂ ದೊಡ್ಡದು ಎಂಬ ಮಾತಿನ ಅರ್ಥವನ್ನು ಅರಿಯಬೇಕಷ್ಟೇ. ನಾಲ್ಕು ಅಗುಳು ಕಡಿಮೆ ತಿಂದರೂ ಪರವಾಗಿಲ್ಲ. ಹತ್ತು ಅಗುಳು ಕಸವಾಗದಂತಹ ತೀರ್ಮಾನಗಳನ್ನು ನಮ್ಮೆಲ್ಲರ ಮನೆಗಳಲ್ಲಿ ಜಾರಿಗೊಳಿಸಬೇಕು. ಹಸಿವಾದಾಗ ಅನ್ನ ಕಂಡರೆ ಸಾಕು ಅಂತೀವಿ. ಹಾಗೆಯೇ ಎಲ್ಲಾ ಜೀವಿಗಳಿಗೂ ಹಸಿವಿನ ಕೂಗು ಇದ್ದೆ ಇದೇ. ಈಗ ಹೋಟೆಲ್‍ಗಳಲ್ಲಿ ಎಷ್ಟೊಂದು ಪದಾರ್ಥಗಳು ಕಸದ ಗಾಡಿಗೆ ಹೋಗುತ್ತಿವೆ. ಇದೆಲ್ಲವನ್ನು ತಡೆಗಟ್ಟುವುದು ಹೇಗೆ..? ಮನೆ-ಮನೆಗಳಲ್ಲಿ ತಾಟಿನಲ್ಲಿಯೇ ಅನ್ನವನ್ನು ಬಿಟ್ಟು ಅದಕ್ಕೆ ನೀರು ಹಾಕುವ ಎಷ್ಟು ಜನರಿಲ್ಲ. ಇನ್ನಾದರೂ ನಮ್ಮ ಜನ ಎಚ್ಚೆತ್ತುಕೊಳ್ಳಲಿ. ಆಹಾರವನ್ನು ಬಿಸಾಡದೆ ಅಗತ್ಯವಿರುವವರಿಗೆ ನೀಡಲಿ ಎಂಬುದೇ ನಮ್ಮ ಆಶಯ.

ಮುಗಿಬಿದ್ದ ಜನ ತಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನ್ನ ಬಡಿಸಿಕೊಂಡು ಹೊಟ್ಟೆ ತುಂಬಿದಲ್ಲಿ ಕಸದ ರಾಶಿಗೆ ಚೆಲ್ಲುವುದಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ಅನ್ನ ದೇವತೆಯನ್ನು ಕಸದ ರಾಶಿ ಮಾಡುವುದು ಬೇಡವೆ ಬೇಡ. ಅನ್ನ ಇಲ್ಲದೆ ಭಿಕ್ಷೆ ಬೇಡುತ್ತಾ ಅತ್ತು-ಅತ್ತು ಸುಸ್ತಾಗಿ ಮಲಗುವ ಬಡ ಮಕ್ಕಳು ಎಷ್ಟಿಲ್ಲ.

Facebook Comments

Sri Raghav

Admin