ಆರಂಭವಾಯ್ತು ಕಲಾಪ, ಅಂಕಿಯಾಟಕ್ಕೆ ಕ್ಷಣಗಣನೆ..!

ಈ ಸುದ್ದಿಯನ್ನು ಶೇರ್ ಮಾಡಿ

Session--01

ಬೆಂಗಳೂರು, ಮೇ 19-  ಮಹತ್ವದ ಅಧಿವೇಶನದ ದಿನವಾದ ಇಂದು ಏನಾಗುತ್ತೋ ಏನೋ ಎಂಬ ತೀವ್ರ ಕುತೂಹಲ ಕೆರಳಿಸಿದೆ.   ಒಂದೇ ಮಾತರಂ ಗೀತೆಯೊಂದಿಗೆ ಕಲಾಪ ಪ್ರಾರಂಭವಾದ ನಂತರ ನೂತನ ಶಾಸಕರ ಪ್ರಮಾಣ ವಚನಕ್ಕೆ ಸೂಚಿಸಿದರು. ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಲ್‍ಪಿ ನಾಯಕ ಕುಮಾರಸ್ವಾಮಿ ಸೇರಿದಂತೆ ಎಲ್ಲ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಆನಂದ್‍ಸಿಂಗ್ ಮತ್ತು ಪ್ರತಾಪ್‍ಗೌಡ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಇನ್ನುಳಿದಂತೆ ಎಲ್ಲ ಶಾಸಕರ ಹಾಜರಾತಿ ಇತ್ತು. ಹಲವು ಶಾಸಕರು ಸದನದೊಳಗೆ ಪ್ರವೇಶಿಸುವಾಗ ಸದನದ ಬಾಗಿಲಿಗೆ ನಮಸ್ಕರಿಸಿ ಬರುತ್ತಿರುವುದು ಕಂಡುಬಂತು.

ಅಧಿಕಾರಿಗಳ ಗ್ಯಾಲರಿಯಲ್ಲಿ ಸಂಸದರಾದ ಪ್ರಕಾಶ್ ಹುಕ್ಕೇರಿ, ಡಿ.ಕೆ.ಸುರೇಶ್, ಕೆ.ಎಚ್.ಮುನಿಯಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್‍ಕುಮಾರ್ ಮುಂತಾದವರು ಕುಳಿತಿದ್ದರು.   ಕಟ್ಟುನಿಟ್ಟಾದ ಕ್ರಮದ ಹಿನ್ನೆಲೆಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಯಾರೂ ಇರಲಿಲ್ಲ. ಹಂಗಾಮಿ ಸ್ಪೀಕರ್ ಅವರ ನೇಮಕವನ್ನು ಖಂಡಿಸಿ ಕಾಂಗ್ರೆಸ್ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ಏನಾಗುತ್ತದೋ, ಏನೋ ಎಂಬ ಆತಂಕ ಕೂಡ ಇತ್ತು. ಆದರೆ, ನೇಮಕಾತಿ ಪ್ರಶ್ನಿಸಿದ್ದ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಬೋಪಯ್ಯ ಅವರ ನೇತೃತ್ವದಲ್ಲಿ ಕಲಾಪ ನಿರಾತಂಕವಾಗಿ ಮುಂದುವರಿಯಲು ಸಾಧ್ಯವಾಯಿತು. ಪ್ರಮಾಣ ವಚನ ಸ್ವೀಕಾರದ ನಂತರ ಪಕ್ಷದ ಅಧ್ಯಕ್ಷರುಗಳು ಶಾಸಕರಿಗೆ ವಿಪ್ ನೀಡಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಬಹುಮತ ಸಾಬೀತಿಗೆ ವಿಶ್ವಾಸಮತ ಕೋರಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ಇಂದು ಕರೆದಿರುವ ಅಧಿವೇಶನ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಸರ್ಕಾರ ಉಳಿಯುತ್ತೋ, ಉರುಳುತ್ತೋ ಎಂಬ ಆತಂಕ ಮನೆ ಮಾಡಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದ್ದರೆ, ಸರ್ಕಾರವನ್ನು ಉರುಳಿಸಿ ಮೈತ್ರಿ ಸರ್ಕಾರ ರಚಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ತನ್ನ ಪಟ್ಟನ್ನು ಮುಂದುವರಿಸಿದ್ದು, ಸಂಜೆ ನಿರ್ಣಾಯಕ ಅಂಶ ಹೊರಬೀಳಲಿದೆ.

ಸರ್ಕಾರವನ್ನು ಉಳಿಸಿಕೊಳ್ಳುವ ಸಂಬಂಧ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ತನ್ನೆಲ್ಲ ಶಾಸಕರಿಗೆ ಆತ್ಮವಿಶ್ವಾಸದಿಂದಿರುವಂತೆ ಹೇಳಿದೆ.  ಅದೇ ರೀತಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟವು ಕೂಡ ತನ್ನೆಲ್ಲ ಶಾಸಕರನ್ನು ಒಗ್ಗಟ್ಟಾಗಿಟ್ಟುಕೊಂಡು ವಿಶ್ವಾಸಮತದ ವಿರುದ್ಧ ಮತ ಚಲಾಯಿಸುವಂತೆ ಸೂಚಿಸಿದೆ. ಸಂಜೆ ಏನಾಗುತ್ತದೆಯೋ ಏನೋ ಕಾದು ನೋಡಬೇಕು. ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡ ಕೆ.ಜಿ.ಬೋಪಯ್ಯ ಅವರು ಇಂದು ಬೆಳಗ್ಗೆ 11 ಗಂಟೆಗೆ ಕಲಾಪವನ್ನು ಪ್ರಾರಂಭಿಸಿದರು.

 

Facebook Comments

Sri Raghav

Admin