ಗೋಲ್ಡ್ ಪಿಂಚ್ ಹೊಟೇಲ್‍ನಲ್ಲಿ ಹೈಡ್ರಾಮಾ..!

ಈ ಸುದ್ದಿಯನ್ನು ಶೇರ್ ಮಾಡಿ

Godl-Finch

ಬೆಂಗಳೂರು, ಮೇ 19- ಕಾಂಗ್ರೆಸ್‍ಗೆ ಕೈ ಕೊಟ್ಟು ಬಿಜೆಪಿ ಜತೆ ಗುರುತಿಸಿಕೊಂಡಿರುವ ಶಾಸಕರಾದ ಆನಂದ್‍ಸಿಂಗ್ ಮತ್ತು ಪ್ರತಾಪ್‍ಗೌಡ ಪಾಟೀಲ್ ಅವರಿಗೆ ವಿಪ್ ನೀಡಲು ವಿಫಲವಾದ ಘಟನೆ ನಗರದ ಗೋಲ್ಡ್ ಪಿಂಚ್ ಹೊಟೇಲ್‍ನಲ್ಲಿ ನಡೆದಿದೆ. ಬಿಜೆಪಿ ಶಾಸಕ ಸೋಮಶೇಖರ್‍ರೆಡ್ಡಿ ಅವರೊಂದಿಗೆ ಆನಂದ್‍ಸಿಂಗ್ ಮತ್ತು ಪ್ರತಾಪ್‍ಗೌಡ ಪಾಟೀಲ್ ಅವರು ವಿಶೇಷ ವಿಮಾನದಲ್ಲಿ ನಗರಕ್ಕೆ ಆಗಮಿಸಿ ಗೋಲ್ಡ್‍ಪಿಂಚ್ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ ಮುಖಂಡರಿಗೆ ಲಭಿಸಿದೆ.  ಈ ಮಾಹಿತಿ ಆಧಾರದ ಮೇಲೆ ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ಹೊಟೇಲ್‍ಗೆ ಆಗಮಿಸಿ ಆನಂದ್‍ಸಿಂಗ್ ಮತ್ತು ಪ್ರತಾಪ್‍ಗೌಡ ಪಾಟೀಲ್ ಅವರಿಗೆ ವಿಪ್ ನೀಡಲು ಮುಂದಾದರು.

ಆದರೆ, ವಿಪ್ ಪಡೆಯಲು ನಿರಾಕರಿಸಿದ ಆ ಇಬ್ಬರು ಶಾಸಕರು ರೂಂ ಬಾಗಿಲು ಹಾಕಿಕೊಂಡು ಪೊಲೀಸರನ್ನು ಸಂಪರ್ಕಿಸಿ ನಮಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡರು.  ತಕ್ಷಣ ಹೊಟೇಲ್‍ಗೆ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹಾಗೂ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‍ಕುಮಾರ್ ಭೇಟಿ ನೀಡಿ ಆ ಇಬ್ಬರು ಶಾಸಕರಿಗೆ ಭದ್ರತೆ ಒದಗಿಸಿದರು. ವಿಪ್ ನೀಡಲು ವಿಫಲರಾದ ನಂತರ ಹೊಟೇಲ್ ಮುಂಭಾಗ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಎಂ.ರೇವಣ್ಣ ಅವರು ನಾವು ಇಲ್ಲಿ ಗಲಾಟೆ ಮಾಡಲು ಬಂದಿಲ್ಲ. ನಮ್ಮ ಪಕ್ಷದ ಇಬ್ಬರು ಶಾಸಕರು ಹೊಟೇಲ್‍ನಲ್ಲಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ವಿಪ್ ನೀಡುವ ಉದ್ದೇಶದಿಂದ ನಾವು ಇಲ್ಲಿಗೆ ಬಂದಿದ್ದೇವೆ.  ಹೊಟೇಲ್ ಸಿಬ್ಬಂದಿ ಮತ್ತು ಪೊಲೀಸರಿಗೆ ಪಕ್ಷದ ನಿರ್ಣಯದಂತೆ ವಿಪ್ ನೀಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡೆವು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ ಎಂದರು.

Facebook Comments

Sri Raghav

Admin