ವಿಶ್ವದಾಖಲೆಯ ಪ್ರಪಂಚ ಪರ್ಯಟನೆಯನ್ನು ಯಶಸ್ವಿಯಾಗಿ ಮುಗಿಸಿದ ನೌಕಾಪಡೆ ವೀರ ವನಿತೆಯರು..!

ಈ ಸುದ್ದಿಯನ್ನು ಶೇರ್ ಮಾಡಿ

World--01

ಪಣಜಿ, ಮೇ 19-ಐಎನ್‍ಎಸ್‍ವಿ ತಾರಿಣಿ ನೌಕೆಯಲ್ಲಿ ಎಂಟು ತಿಂಗಳ ಕಾಲ ಯಶಸ್ವಿ ಪ್ರಪಂಚ ಪ್ರದಕ್ಷಿಣೆ ಬಳಿಕ ಭಾರತೀಯ ನೌಕಾಪಡೆಯ ಮಹಿಳಾ ಯೋಧರು ಕರಾವಳಿ ರಾಜ್ಯ ಗೋವಾಗೆ ಹಿಂದಿರುಗಿದ್ದಾರೆ. ಇದು ಮಹಿಳೆಯರೇ ಕೈಗೊಂಡ ಪ್ರಪ್ರಥಮ ವಿಶ್ವ ಪರ್ಯಟನೆ ಎಂಬ ಹೆಗ್ಗಳಿಕೆ ಪಡೆದಿದೆ. ಈ ವೀರವನಿತೆಯರ ವಿಶ್ವಪರ್ಯಟನೆ ಸಾಹಸ ಸಫಲವಾಗಿರುವುದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಮೆಚ್ಚುಗೆ ಸೂಚಿಸಿ ಅಭಿನಂದನೆ ಸಲ್ಲಿಸಿದ್ದಾರೆ.  ಈ ವಿಶ್ವಸಾಗರ ಪರಿಕ್ರಮದ ನೇತೃತ್ವವನ್ನು ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ವಾರ್ಟಿಕಾ ಜೋಷ ವಹಿಸಿದ್ದರು. ಈ ತಂಡದಲ್ಲಿ ಲೆಫ್ಟಿನೆಂಟ್ ಕಮಾಂಡರ್‍ಗಳಾದ ಪ್ರತಿಭಾ ಜಾಮ್‍ವಾಲಾ ಮತ್ತು ಪಿ.ಸ್ವಾತಿ ಹಾಗೂ ಲೆಫ್ಟಿನೆಂಟ್‍ಗಳಾದ ಐಶ್ವರ್ಯ ಬೊಡಪಟ್ಟಿ, ವಿಜಯಾದೇವಿ ಮತ್ತು ಪಾಯಲ್ ಗುಪ್ತಾ ಇದ್ದರು.

ಕಳೆದ ವರ್ಷ ಸೆಪ್ಟೆಂಬರ್ 10ರಂದು ಸ್ವದೇಶಿ ನಿರ್ಮಿತ ತಾರಣಿ ನೌಕೆಯಲ್ಲಿ ಈ ತಂಡ ಸಾಹಸಯಾನ ಆರಂಭಿಸಿತ್ತು. ರಕ್ಷಣಾ ಸಚಿವರು ಹಸಿರು ನಿಶಾನೆ ತೋರಿದ್ದರು. ತಾರಿಣಿ 21,600 ನಾಟಿಕಲ್ ಮೈಲಿ ಪ್ರದಕ್ಷಿಣೆ ಹಾಕಿತ್ತು. ಈ ಪರ್ಯಟನೆ ವೇಳೆ ಐದು ದೇಶಗಳಿಗೆ ಭೇಟಿ ನೀಡಿತ್ತು.

ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ಸಮಭಾಜಕ ವೃತ್ತವನ್ನು ಎರಡು ಬಾರಿ ದಾಟುವಲ್ಲಿ ಈ ತಂಡ ಯಶಸ್ವಿಯಾಗಿದೆ. ಅಲ್ಲದೇ ನಾಲ್ಕು ಖಂಡಗಳು ಮತ್ತು ಮೂರು ಮಹಾಸಾಗರಗಳನ್ನು ಕ್ರಮಿಸಿದ್ದು, ಮೂರು ಭೂ ಶಿರಗಳ ಮೂಲಕ ಹಾದು ಹೋಗಿದೆ. ಇದು ಮನುಕುಲಕ್ಕೆ ದೊಡ್ಡ ಸವಾಲಾಗಿದೆ. ಸಮುದ್ರದ ಅಪಾಯಕಾರಿ ಪರಿಸ್ಥಿತಿಯಲ್ಲಿ ಮಹಿಳೆಯರ ತಂಡ ಈ ಸಾಹಸಯಾನ ಕೈಗೊಂಡು ಯಶಸ್ವಿಯಾಗಿರುವುದು ದೊಡ್ಡ ಸಾಧನೆ ಎನ್ನುತ್ತಾರೆ ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಡಿ.ಕೆ.ಶರ್ಮಾ.

Facebook Comments

Sri Raghav

Admin