ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ..?
ಬೆಂಗಳೂರು, ಮೇ 19-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬಹುಮತ ಸಿಗುವುದು ಅನುಮಾನವಾಗಿದೆ. 104 ಸದಸ್ಯ ಬಲವುಳ್ಳ ಬಿಜೆಪಿ ಬಹುಮತ ಪಡೆಯಲು ಸಾಕಷ್ಟು ಕಸರತ್ತು ನಡೆಸಿದ್ದು, ಅದು ಕೈಗೂಡುವ ಸಾಧ್ಯತೆ ಕ್ಷೀಣವಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಸಂಜೆ ರಾಜ್ಯಪಾಲರಿಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದಕ್ಕಾಗಿ ಬಿಎಸ್ವೈ ಸದನದಲ್ಲಿ ವಿದಾಯದ ಭಾಷಣ ಮಾಡಲಿದ್ದಾರೆ. ವಿಶ್ವಾಸ ಮತ ಯಾಚನೆಗೆಂದು ಇಂದು ಕರೆದ ಅಧಿವೇಶನದಲ್ಲಿ ಅವರಿಗೆ ವಿಶ್ವಾಸ ಮತ ಸಿಗುವ ಸಾಧ್ಯತೆಗಳು ಕಡಿಮೆ ಇದೆ ಎಂದು ತಿಳಿದುಬಂದಿದೆ.
ಹಾಗಾಗಿ ತಾವು ರಾಜ್ಯದ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಸಂಬಂಧ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ. ಇದಕ್ಕಾಗಿ 13 ಪುಟಗಳ ಭಾಷಣ ಸಿದ್ಧಗೊಂಡಿದೆ ಎನ್ನಲಾಗಿದೆ. 1996ರಲ್ಲಿ ವಾಜಪೇಯಿ ಅವರು ಇದೇ ರೀತಿ ನಿರ್ಗಮಿಸಿದ್ದರು. ಯಡಿಯೂರಪ್ಪ ಕೂಡ ಇದೇ ರೀತಿ ನಿರ್ಗಮಿಸಿ ಜನರ ಅನುಕಂಪ ಪಡೆಯುವ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಬಹುಮತ ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ 16 ಜನ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ. ಮೊದಲು ಆರು ಜನ ವಿಶ್ವಾಸಮತದ ಪರ ಕೈ ಎತ್ತಬೇಕು. ಆದರೆ ಯಾರು ಮೊದಲು ಕೈ ಎತ್ತುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ 16 ಜನ ಸಂಪರ್ಕ ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಬಿಜೆಪಿಗೆ ಖಚಿತತೆ ಬರುತ್ತಿಲ್ಲ. ಮಧ್ಯವರ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಶಾಸಕರನ್ನು ಸೆಳೆಯಲು ಮಾಡಿರುವ ಪ್ರಯತ್ನ ಕೈಗೂಡುವ ಸಾಧ್ಯತೆ ಕ್ಷೀಣವಾಗಿರುವುದು ಮನದಟ್ಟಾಗುತ್ತಿದೆ. ಹಾಗಾಗಿ ಬಿಎಸ್ವೈ ಸಂಜೆ ರಾಜೀನಾಮೆ ನೀಡುವ ಸಾಧ್ಯತೆ ಇರುವುದು ದಟ್ಟವಾಗುತ್ತಿದೆ. ಒಂದು ವೇಳೆ ಬಿಜೆಪಿ ತಾನು ನಡೆಸಿರುವ ಪ್ರಯತ್ನ ಫಲ ನೀಡಿ ಬಹುಮತ ಸಾಬೀತಾದರೆ ಬಿಎಸ್ವೈ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲಿದ್ದು, ಈ ಮೂಲಕ ಮತ್ತೊಮ್ಮೆ ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲು ತೆರೆಯಲಿದೆ. ಇಲ್ಲದಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ರಾಜ್ಯಪಾಲರು ಅವಕಾಶ ನೀಡಬೇಕಾಗುತ್ತದೆ.