BREAKING : ಬಹುಮತ ಯಾಚಿಸದೆ ಸಿಎಂ ಪಟ್ಟದಿಂದ ಕೆಳಗಿಳಿದ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--0001

ಬೆಂಗಳೂರು, ಮೇ 19-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದನದಲ್ಲಿಂದು ವಿಶ್ವಾಸಮತ ಯಾಚನೆಗೆ ಮುನ್ನವೇ ಸುದೀರ್ಘ ಭಾಷಣ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮೇ 17 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು, ಬಹುಮತ ಸಾಬೀತುಪಡಿಸಲು ಅಂಕಿಸಂಖ್ಯೆಗಳ ಆಟದಲ್ಲಿ ಸಫಲವಾಗಲು ಸಾಧ್ಯವಾಗದಿರುವುದನ್ನು ಅರಿತು ವಿಶ್ವಾಸ ಮತ ಯಾಚನೆ ಮಾಡುವ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿ ನಿರ್ಗಮಿಸಿದರು.ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಸುದೀರ್ಘ ಭಾಷಣವನ್ನು ಮಾಡಿದ ಯಡಿಯೂರಪ್ಪ ತಮ್ಮ ಹೋರಾಟದ ಹಾದಿ, ರಾಜ್ಯದ ಅಭಿವೃದ್ದಿಯ ಭವಿಷ್ಯದ ಯೋಜನೆಗಳ ಬಗ್ಗೆ ಸವಿವರ ನೀಡಿದ ಅವರು, ಅಧಿಕಾರದ ಅವಕಾಶ ಸಿಕ್ಕಿದ್ದರೆ ಮುಂದೆ ಏನು ಮಾಡುತ್ತಿದ್ದೆ ಎಂಬ ಬಗ್ಗೆ ಬೇಸರದಿಂದ ರಾಜೀನಾಮೆಯನ್ನು ಘೋಷಿಸಿದರು.

2016, ಏ.14 ರಂದು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಅವರು ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಅಲ್ಲಿಂದ ರಾಜ್ಯಾದ್ಯಂತ ಸಂಚರಿಸಿ ರಾಜ್ಯದ ಜನರ ಕಷ್ಟಸುಖಗಳನ್ನು ಅರಿತು ಅವರನ್ನು ನೋವು-ನಲಿವಿನಲ್ಲಿ ಭಾಗಿಯಾಗಿದ್ದೆ. 40 ಸ್ಥಾನಗಳಲ್ಲಿದ್ದ ನಮ್ಮ ಪಕ್ಷವನ್ನು ಜನ 104 ಸ್ಥಾನಗಳಿಗೆ ಏರಿಕೆ ಮಾಡಿದ್ದಾರೆ. ಜನಾದೇಶ ನಮ್ಮ ಪರವಾಗಿತ್ತು. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ನಮಗೆ ಬಹುಮತದ ಕೊರತೆಯಾಗಿತ್ತು. ಇದನ್ನು ನಾವು ಒಪ್ಪುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಮುಂದಿನ ನನ್ನ ಜೀವನದ ಕೊನೆ ಉಸಿರುವವರೆಗೂ ಈ ರಾಜ್ಯದ ರೈತರ ದೀನದಲಿತರ ಪರವಾಗಿ ಹೋರಾಟ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ನಾಲ್ಕೂವರೆ ವರ್ಷದಲ್ಲಿ ಅದ್ಭುತವಾದ ಆಡಳಿತ ನೀಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದು ಅವರಿಗೆ ಕೊಡುಗೆ ನೀಡುತ್ತೇವೆ ಎಂದು ಹೇಳಿದರು. ವಿಶ್ವಾಸ ಮತ ಯಾಚಿಸದೆ ಜನತಾ ನ್ಯಾಯಾಲಯದ ಮುಂದೆ ಹೋಗಲು ತೀರ್ಮಾನಿಸಿದ್ದೇನೆ. ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನಮಗಿದೆ. ಕಾಂಗ್ರೆಸ್‍ನವರ ಕುತಂತ್ರ ರಾಜಕಾರಣದಿಂದ ನಮಗೆ ಹಿನ್ನಡೆಯಾಗಿದೆ. ಅಧಿಕಾರ ಸಿಗಲಿ, ಬಿಡಲಿ ವಿರೋಧ ಪಕ್ಷದಲ್ಲಿರಲಿ, ಆಡಳಿತದಲ್ಲಿರಲಿ ಜನರಿಗಾಗಿಯೇ ಪ್ರಾಣ ಕೊಡುತ್ತೇನೆ. ನಾನು ಹೋರಾಟದಿಂದ ಬಂದವನು, ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಜೀವನದ ಕೊನೆಯವರೆಗೂ ಹೋರಾಟ ನಡೆಸುತ್ತೇನೆ ಎಂದುಹೇಳಿದರು.

Updates Awaiting ….

Facebook Comments

Sri Raghav

Admin