ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ, ದಿಕ್ಕು ಕಾಣದ ನಾವಿಕರಂತಾದ ಬಿಜೆಪಿ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

Karnataka-BJP--01

ಬೆಂಗಳೂರು, ಮೇ 20-ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಯಂತಾಗಿರುವ ರಾಜ್ಯ ಬಿಜೆಪಿಯಲ್ಲಿ ಸೂತಕದ ಛಾಯೆ ಆವರಿಸಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸದೆ ಅಧಿಕಾರ ಕಳೆದುಕೊಂಡ ಕಮಲ ನಾಯಕರು ಮುಂದೇನು ಮಾಡಬೇಕೆಂದು ಚಿಂತಾಕ್ರಾಂತರಾಗಿದ್ದು, ದಿಕ್ಕು ಕಾಣದ ನಾವಿಕರಂತಾಗಿದ್ದಾರೆ.

ಕೊನೆ ಕ್ಷಣದವರೆಗೂ ಸರ್ಕಾರ ಉಳಿಸಿಕೊಳ್ಳುತ್ತೇವೆಂದು ಅಪಾರ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ನಾಯಕರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವುದರಿಂದ ಮುಂದೆ ಯಾವ ತಂತ್ರ ಹೆಣೆಯಬೇಕು ಎಂಬ ಆಲೋಚನೆಯಲ್ಲಿದ್ದಾರೆ. ಇಂದು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಾಗಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಧವಳಗಿರಿ ನಿವಾಸದಲ್ಲಿ ಯಾವುದೇ ಚಟುವಟಿಕೆಗಳು ಕಂಡು ಬರಲಿಲ್ಲ. ಕಳೆದ ಐದು ದಿನಗಳಿಂದ ಬಿಜೆಪಿ ಕಚೇರಿ ಹಾಗೂ ಯಡಿಯೂರಪ್ಪನವರ ನಿವಾಸದಲ್ಲಿ ಎಡೆಬಿಡದೆ ನಿರಂತರ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಇಂದು ಪಕ್ಷದ ಯಾವುದೇ ನಾಯಕರಲ್ಲಿ ಲವಲವಿಕೆ, ಉತ್ಸಾಹ ಕಂಡುಬರಲಿಲ್ಲ. ಬದಲಿಗೆ ಎಲ್ಲರಲ್ಲೂ ಹತಾಶೆ, ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿತ್ತು.

ಕಾಂಗ್ರೆಸ್-ಜೆಡಿಎಸ್ ಹೂಡಿದ ರಣತಂತ್ರವನ್ನು ಭೇದಿಸುವಲ್ಲಿ ವಿಫಲರಾದೆವು. 104 ಸದಸ್ಯರನ್ನು ಗೆದ್ದು ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಪ್ರತಿಯೊಬ್ಬರಲ್ಲೂ ಕಾಣುತ್ತಿತ್ತು. ಬಹುಮತ ವಿಶ್ವಾಸ ಮತ ಯಾಚನೆ ವೇಳೆ ಪಕ್ಷಕ್ಕೆ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದ್ದ ಕೆಲ ಶಾಸಕರು, ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದರಿಂದ ಪಕ್ಷದ ಪ್ರಮುಖರು ಅಂಥವರ ವಿರುದ್ಧ ಒಳಗೊಳಗೇ ಕಿಡಿಕಾರುತ್ತಿದ್ದರು.  ಇನ್ನು ನಿನ್ನೆಯವರೆಗೂ ಯಡಿಯೂರಪ್ಪನವರ ನಿವಾಸ ಧವಳಗಿರಿ ಅಕ್ಷರಶಃ ಆಡಳಿತ ಶಕ್ತಿ ಕೇಂದ್ರವಾಗಿತ್ತು. 3ನೇ ಬಾರಿಗೆ ತಮ್ಮ ನಾಯಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಕಾರಣಕ್ಕಾಗಿ ಬೆಂಬಲಿಗರು, ಶಾಸಕರು, ಹಿತೈಷಿಗಳು ದಾಂಗುಡಿ ಇಡುತ್ತಿದ್ದರು. ಆದರೆ ಇಂದು ದವಳಗಿರಿಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಮಂದಿ ಆಗಮಿಸಿದ್ದರು.

ಕೆಲವರು ಯಡಿಯೂರಪ್ಪನವರಿಗೆ ಆತ್ಮವಿಶ್ವಾಸ, ಧೈರ್ಯ ತುಂಬುವ ಪ್ರಯತ್ನ ಮಾಡಿದರು.  ಇನ್ನು ಅಧಿಕಾರ ಕಳೆದುಕೊಂಡ ಕಾರಣಕ್ಕಾಗಿ ಕೆಲವರು ಕಳೆದ ರಾತ್ರಿಯೇ ತಮ್ಮ ತಮ್ಮ ಕ್ಷೇತ್ರಗಳಿಗೆ ಹಿಂತಿರುಗಿದ್ದರು. ಒಟ್ಟಾರೆ ರಾಜ್ಯ ಬಿಜೆಪಿಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಮುಂದೆ ಇದು ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾಲವೇ ತೀರ್ಮಾನಿಸಬೇಕು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin