ಬಹುಮತ ಸಾಬೀತುಪಡಿಸುವವರೆಗೂ ಹೊಟೇಲ್‍ ನಲ್ಲೆ ಜೆಡಿಎಸ್ ಶಾಸಕರ ವಾಸ್ತವ್ಯ

ಈ ಸುದ್ದಿಯನ್ನು ಶೇರ್ ಮಾಡಿ

JDS--01

ಬೆಂಗಳೂರು, ಮೇ 20- ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಬಹುಮತ ಸಾಬೀತುಪಡಿಸುವವರೆಗೂ ಜೆಡಿಎಸ್ ಶಾಸಕರು ಖಾಸಗಿ ಹೊಟೇಲ್‍ನಲ್ಲಿ ವಾಸ್ತವ್ಯ ಮುಂದುವರಿಸಲಿದ್ದಾರೆ. ಆಪರೇಷನ್ ಕಮಲದ ಭೀತಿಯಿಂದಾಗಿ ಈಗಾಗಲೇ ಖಾಸಗಿ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರನ್ನು ತಮ್ಮ ಹಿಡಿತದಲ್ಲೇ ಹಿಡಿದಿಟ್ಟುಕೊಳ್ಳಲು ನಾಯಕರು ಮುಂದಾಗಿದ್ದಾರೆ.

ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದಂತೆ ತಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೆ ಖಾಸಗಿ ಹೊಟೇಲ್‍ನಲ್ಲಿ ವಾಸ್ತವ್ಯದ ವ್ಯವಸ್ಥೆಯನ್ನು ಜೆಡಿಎಸ್ ಮಾಡಿತ್ತು. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಆಪರೇಷನ್ ಕಮಲ ನಡೆಯಬಹುದೆಂಬ ಉದ್ದೇಶದಿಂದ ಎಲ್ಲ ಶಾಸಕರನ್ನೂ ಹೈದರಾಬಾದ್‍ಗೆ ಕರೆದೊಯ್ಯಲಾಗಿತ್ತು.

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತುರ್ತು ಅಧಿವೇಶನ ಕರೆದು ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಬೇಕಾದ ಸನ್ನಿವೇಶ ಸೃಷ್ಟಿಯಾದ ಬೆನ್ನಲ್ಲೇ ಜೆಡಿಎಸ್ ಶಾಸಕರು ಹೈದರಾಬಾದ್‍ನಿಂದ ನಗರಕ್ಕೆ ಆಗಮಿಸಿದ್ದರು. ನಿನ್ನೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬುಧವಾರ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲರು ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಅಷ್ಟರಲ್ಲಿ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. ಬಹುಮತ ಸಾಬೀತುಪಡಿಸುವವರೆಗೂ ಜೆಡಿಎಸ್ ಶಾಸಕರೆಲ್ಲ ಒಟ್ಟಾಗಿ ಒಂದೆಡೆ ಇರಲು ಅನುಕೂಲವಾಗುವಂತೆ ಖಾಸಗಿ ಹೊಟೇಲ್‍ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ನಗರದಿಂದ ಹೊರಗೆ ಜೆಡಿಎಸ್ ಶಾಸಕರು ತೆರಳಿ ವಾಸ್ತವ್ಯ ಹೂಡಲಿದ್ದಾರೆ ಎಂಬ ವದಂತಿಗಳನ್ನು ಪಕ್ಷದ ಮೂಲಗಳು ಅಲ್ಲಗಳೆದಿವೆ.

Facebook Comments

Sri Raghav

Admin