ಸಿದ್ದರಾಮಯ್ಯ ನಿವಾಸಕ್ಕೆ ಸಚಿವಕಾಂಕ್ಷಿಗಳ ದಂಡು, ಲಾಬಿ ಜೋರು..

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಮೇ 20- ವಿಶ್ವಾಸ ಮತ ಯಾಚನೆಯಲ್ಲಿ ಯಡಿಯೂರಪ್ಪ ಸೋಲು ಕಂಡ ನಂತರ ಅಸ್ತಿತ್ವಕ್ಕೆ ಬರುತ್ತಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ಆರಂಭಗೊಂಡಿದೆ. ಜೆಡಿಎಸ್‍ನ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾಂಗ್ರೆಸ್‍ನ ರಾಜ್ಯಾಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಆದರೆ ಈವರೆಗೂ ಇದು ಅಂತಿಮಗೊಂಡಿಲ್ಲ. ಅದರ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ಆರಂಭವಾಗಿದೆ.

ಒಟ್ಟು 34 ಸ್ಥಾನಗಳ ಸಂಪುಟದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೊರತುಪಡಿಸಿದರೆ 32 ಸ್ಥಾನಗಳು ಲಭ್ಯವಾಗ ಲಿದ್ದು, ಅದರಲ್ಲಿ ಕಾಂಗ್ರೆಸ್ ಹೆಚ್ಚಿನ ಪಾಲು ಬೇಕು ಎಂಬ ಬೇಡಿಕೆ ಮುಂದಿಟ್ಟಿದೆ.  ಬೇಷರತ್ ಆಗಿ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿರುವುದರಿಂದ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಜೆಡಿಎಸ್ ವರ್ಚಸ್ಸು ಹೆಚ್ಚಾಗಲು ಅವಕಾಶ ಸಿಕ್ಕಿರುವುದರಿಂದ ಕಾಂಗ್ರೆಸ್‍ಗೆ ಸಚಿವ ಸ್ಥಾನದಲ್ಲಿ ಹೆಚ್ಚಿನ ಪಾಲು ಕೊಡಬೇಕೆಂಬ ವಾದಗಳು ಕೇಳಿ ಬಂದಿವೆ.

ಮೂಲಗಳ ಪ್ರಕಾರ ಕಾಂಗ್ರೆಸ್‍ಗೆ 18 ಸ್ಥಾನಗಳನ್ನು ಬಿಟ್ಟುಕೊಡಬೇಕು. ಜೆಡಿಎಸ್ 14 ಸ್ಥಾನಗಳನ್ನು ತೆಗೆದುಕೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಇನ್ನು ಎರಡು ದಿನಗಳ ಕಾಲಾವಕಾಶವಿರುವುದರಿಂದ ಇಂದು ಮತ್ತು ನಾಳೆ ಸಂಪುಟ ವಿಸ್ತರಣೆ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಹಿರಿಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ.

ವಿಶ್ವಾಸ ಮತ ಯಾಚನೆ ಗೆಲ್ಲಲು ಉಭಯ ಪಕ್ಷಗಳ ಶಾಸಕರನ್ನು ರೆಸಾರ್ಟ್ ಮತ್ತು ಖಾಸಗಿ ಹೊಟೇಲ್‍ಗಳಲ್ಲಿ ಇರಿಸಲಾಗಿತ್ತು. ಇಂದೂ ಲೀ ಮೆರಿಡಿಯನ್ ಹೊಟೇಲ್‍ನಲ್ಲಿ ಮಹತ್ವದ ಸಭೆ ನಡೆಸಿದ ಜೆಡಿಎಸ್ ಶಾಸಕರು ಆನಂತರ ಸ್ವಕ್ಷೇತ್ರಗಳತ್ತ ತೆರಳಿದರು. ಕಾಂಗ್ರೆಸ್ ಶಾಸಕರು ಕೂಡ ಸ್ವಕ್ಷೇತ್ರಗಳಿಗೆ ತೆರಳಲು ರೆಸಾರ್ಟ್‍ನಿಂದ ಹೊರಟರು. ಈಗ ಸ್ವಲ್ಪ ವಿಶ್ರಾಂತಿ ಮೂಡ್‍ನಲ್ಲಿರುವ ಉಭಯ ಪಕ್ಷಗಳ ನಾಯಕರು ಸಂಪುಟ ಪುನಾರಚನೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.

ಉಭಯ ಪಕ್ಷಗಳಲ್ಲಿರುವ ಹಿರಿಯ ಶಾಸಕರ ಪಟ್ಟಿ ಸಿದ್ಧಪಡಿಸಲಾಗಿದ್ದು, ಅದರಲ್ಲಿ ಜಾತಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯ ಆಧಾರದ ಮೇಲೆ ಸಚಿವರನ್ನು ಆಯ್ಕೆ ಮಾಡಿಕೊಳ್ಳುವ ಕಸರತ್ತು ನಡೆದಿದೆ. ಕಾಂಗ್ರೆಸ್‍ನಲ್ಲಿ ಆರ್.ವಿ.ದೇಶಪಾಂಡೆ ಎಂಟನೇ ಬಾರಿಗೆ ಶಾಸಕರಾಗಿದ್ದು, ರೋಷನ್‍ಬೇಗ್, ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್ 7 ಬಾರಿ, ಕೆ.ಆರ್.ರಮೇಶ್‍ಕುಮಾರ್ 6 ಬಾರಿ, ರಮೇಶ್ ಜಾರಕಿಹೊಳಿ, ಶಿವಾನಂದಪಾಟೀಲ್, ಎಂ.ಬಿ. ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ, ಎನ್.ಎಚ್.ಶಿವಶಂಕರರೆಡ್ಡಿ, ಕೃಷ್ಣಭೈರೇಗೌಡ, ಕೆ.ಜೆ.ಜಾರ್ಜ್, ದಿನೇಶ್‍ಗುಂಡೂರಾವ್, ವಿ.ಮುನಿಯಪ್ಪ, ಅಮರೇಗೌಡ ಬೈಯ್ಯಾಪುರ ಅವರು 5 ಬಾರಿಗೆ ಶಾಸಕರಾಗಿದ್ದಾರೆ.

ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಪಿ.ಟಿ.ಪರಮೇಶ್ವರ್ ನಾಯಕ್, ಯು.ಟಿ.ಖಾದರ್, ಜಮೀರ್ ಅಹಮ್ಮದ್ ಖಾನ್, ಶರಣ ಬಸಪ್ಪ ದರ್ಶನಾಪುರ್, ವೆಂಕಟರಮಣಪ್ಪ 4 ಬಾರಿ, ಸತೀಶ್ ಜಾರಕಿ ಹೊಳಿ, ಈಶ್ವರ್ ಖಂಡ್ರೆ, ಪ್ರತಾಪ್‍ಗೌಡ ಪಾಟೀಲ್, ಸಿ.ಎಸ್.ಶಿವಳ್ಳಿ, ತುಕಾರಾಮ್, ಎನ್.ಎ.ಹ್ಯಾರೀಸ್, ಎಂ.ಕೃಷ್ಣಪ್ಪ, ಎಂ.ಟಿ.ಬಿ.ನಾಗರಾಜ್, ಪುಟ್ಟರಂಗ ಶೆಟ್ಟಿ, ರಹೀಮ್‍ಖಾನ್, ಬಿ.ನಾಗೇಂದ್ರ, ಎಂ.ವೈ.ಪಾಟೀಲ್, ಬಿ.ಕೆ.ಸಂಗಮೇಶ್ 3 ಬಾರಿ ಶಾಸಕರಾಗಿದ್ದಾರೆ. ಉಳಿದಂತೆ ಕಳೆದ ಸರ್ಕಾರದಲ್ಲಿ ಮೊದಲ ಅವಧಿಯ ಶಾಸಕರಾಗಿ ಸಚಿವರಾದ ಪ್ರಿಯಾಂಕ್ ಖರ್ಗೆ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.  ಎರಡನೇ ಬಾರಿ ಆಯ್ಕೆಯಾದವರ ಪೈಕಿ ಅಜಯ್‍ಧರ್ಮಸಿಂಗ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಮೊದಲ ಬಾರಿ ಶಾಸಕರಾಗಿರುವ ಪೈಕಿ ಲಕ್ಷ್ಮೀ ಹೆಬ್ಬಾಳ್ಕರ್, ರೂಪಾಶಶಿಧರ್, ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತಿತರರು ಸಚಿವ ಸಂಪುಟದ ರೇಸ್‍ನಲ್ಲಿದ್ದಾರೆ.

ಇನ್ನು ಜೆಡಿಎಸ್‍ನಲ್ಲಿ ಐದು ಬಾರಿ ಶಾಸಕರಾಗಿರುವ ಎಚ್.ಡಿ.ರೇವಣ್ಣ, ಕೆ.ಶ್ರೀನಿವಾಸಗೌಡ, 4ನೆ ಅವಧಿಗೆ ಆಯ್ಕೆಯಾಗಿರುವ ಜಿ.ಟಿ.ದೇವೇಗೌಡ, ಎಸ್.ಆರ್.ಶ್ರೀನಿವಾಸ್, ಎಚ್.ವಿಶ್ವನಾx, ಎ.ಟಿ.ರಾಮಸ್ವಾಮಿ, 3ನೆ ಅವಧಿಗೆ ಶಾಸಕರಾಗಿರುವ ಕೆ.ಎಂ.ಶಿವಲಿಂಗೇಗೌಡ, ಸಾ.ರಾ.ಮಹೇಶ್, ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, 2ನೇ ಬಾರಿಗೆ ಶಾಸಕರಾಗಿರುವ ಸಿ.ಎನ್.ಬಾಲಕೃಷ್ಣ, ಬಂಡೆಪ್ಪ ಕಾಶಂಪುರ್, ಡಾ.ಕೆ.ಅನ್ನದಾನಿ, ವೆಂಕಟರಾವ್ ನಾಡಗೌಡ, ಬಿ.ಸತ್ಯನಾರಾಯಣ ಮತ್ತಿತರರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಜೊತೆಗೆ ಜೆಡಿಎಸ್ ಜೊತೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಎಸ್‍ಪಿಯಿಂದ ಆಯ್ಕೆಯಾಗಿರುವ ಎನ್.ಮಹೇಶ್, ಕಾಂಗ್ರೆಸ್ ಬೆಂಬಲಿಸಿರುವ ಪಕ್ಷೇತರರಾದ ಆರ್.ಶಂಕರ್, ಎಚ್.ನಾಗೇಶ್ ಅವರುಗಳು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

Facebook Comments

Sri Raghav

Admin