ಡಿಸಿಎಂ ಸ್ಥಾನಕ್ಕಾಗಿ ಲಿಂಗಾಯತ ಶಾಸಕರ ಲಾಬಿ, ದೆಹಲಿಗೆ ಕೈಪಡೆ ದೌಡು

ಈ ಸುದ್ದಿಯನ್ನು ಶೇರ್ ಮಾಡಿ

DCM-Chair

ಬೆಂಗಳೂರು, ಮೇ 21- ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬಂತೆ ಕಾಂಗ್ರೆಸ್‍ನಲ್ಲಿ ಮೈತ್ರಿ ಸರ್ಕಾರ ಸುಭದ್ರತೆ ಸಾಧಿಸುವ ಮುನ್ನವೇ ಡಿಸಿಎಂ ಹಾಗೂ ಸಚಿವ ಸ್ಥಾನದ ಲಾಬಿ ಆರಂಭವಾಗಿದೆ. ಲಿಂಗಾಯತರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್‍ನ ಒಂದು ವರ್ಗ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಮುಂದೆ ಲಾಬಿ ನಡೆಸಲು ಮುಂದಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರ ರಚನೆಯ ಆರಂಭದಲ್ಲೇ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಇನ್ನು ಉಪಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ ಪಾಲಿಗೆ ಒಲಿದು ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆ ಅದನ್ನು ಲಿಂಗಾಯತ -ವೀರಶೈವ ಸಮುದಾಯಕ್ಕೆ ಬಿಟ್ಟುಕೊಡಬೇಕೆಂಬ ಒತ್ತಡಗಳು ಹೆಚಾಗಿವೆ.

ಕಾಂಗ್ರೆಸ್‍ನಲ್ಲಿ ಅತ್ಯಂತ ಹಿರಿಯ ನಾಯಕರಾದ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಜೊತೆಗೆ ಐದು ಮಂದಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವೀರಶೈವ ಲಿಂಗಾಯತರು ದೆಹಲಿಗೆ ತೆರಳಲು ಮುಂದಾಗಿದ್ದಾರೆ.  ಕಾಂಗ್ರೆಸ್‍ನಲ್ಲಿ 16 ಮಂದಿ, ಜೆಡಿಎಸ್‍ನಲ್ಲಿ 4 ಮಂದಿ ವೀರಶೈವ ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹೆಚ್ಚಿನ ಸ್ಥಾನಗಳು ಸಿಗಬೇಕಾದರೆ ಲಿಂಗಾಯತ ಸಮುದಾಯದ ಬೆಂಬಲ ಅನಿವಾರ್ಯ. ಇಲ್ಲದೆ ಹೋದರೆ ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಬಿಜೆಪಿ ಸಮುದಾಯದ ಮತಗಳನ್ನು ಸೆಳೆದುಕೊಳ್ಳಲಿದೆ ಎಂಬ ವಾದ ಮುಂದಾಗಿದೆ.

ಈ ನಡುವೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಶ್ಯಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್ ನಡುವೆ ತೀವ್ರ ಪೈಪೆÇೀಟಿ ನಡೆಯುತ್ತಿದೆ. ಅದರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್.ಆರ್.ಪಾಟೀಲ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂಬ ಒತ್ತಡ ಹೇರಲಾರಂಭಿಸಿದ್ದಾರೆ ಎಂದು ಹೇಳಲಾಗಿದೆ. ಎಂ.ಬಿ.ಪಾಟೀಲ್ ಕಾಂಗ್ರೆಸ್‍ನ ಇತರ ನಾಯಕರ ಜೊತೆ ಸೇರಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಪ್ರಾತಿನಿಧ್ಯ ಕೊಡಿಸಲು ಹೋರಾಟ ನಡೆಸಿದರು. ಆ ಸಂದರ್ಭದಲ್ಲಿ ವೀರಶೈಔ ಮತ್ತು ಲಿಂಗಾಯತ ಸಮುದಾಯಗಳ ನಡುವೆ ಪರ-ವಿರೋಧದ ಚರ್ಚೆಗಳು ವ್ಯಾಪಕವಾಗಿದ್ದವು. ಶ್ಯಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ವೀರಶೈವರ ಪರ ವಕಾಲತ್ತು ವಹಿಸಿದರೆ, ಎಂ.ಬಿ.ಪಾಟೀಲ್, ವಿನಯ್‍ಕುಲಕರ್ಣಿ, ಶರಣಪ್ರಕಾಶ್ ಪಾಟೀಲ್ ಮತ್ತಿತರರು ಲಿಂಗಾಯತ ಧರ್ಮದ ಪರವಾಗಿ ವಾದ ಮಾಡುತ್ತಿದ್ದರು.

ಇದರಿಂದಾಗಿ ಕಾಂಗ್ರೆಸ್‍ಗೆ ಹಿನ್ನಡೆಯಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದ ನಂತರ ಕೆಲವರು ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಸೇರಿದಂತೆ ಯಾವುದೇ ಪ್ರಮುಖ ಹುದ್ದೆ ನೀಡಬಾರದು ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಶ್ಯಾಮನೂರು ಅವರಿಗೆ ಪ್ರಮುಖ ಹುದ್ದೆ ನೀಡಲು ಕೆಲವರು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಹೀಗಾಗಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕಾಂಗ್ರೆಸ್‍ನಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಲಾಬಿ ಜೋರಾಗಿ ನಡೆಯುತ್ತಿದೆ.

ಜೆಡಿಎಸ್ ವಿರೋಧ:
ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಕಾಂಗ್ರೆಸ್ ಪಾಲಿಗೆ ಬರಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ದಕ್ಕಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಜೆಡಿಎಸ್ ಪಾಳಯ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಎರಡನ್ನೂ ತಾನೇ ಇಟ್ಟುಕೊಳ್ಳುವ ಮತ್ತು ಸಚಿವ ಸಂಪುಟದಲ್ಲಿ ಹೆಚ್ಚು ಸ್ಥಾನ ತೆಗೆದುಕೊಳ್ಳುವ ಉತ್ಸುಕತೆಯಲ್ಲಿರುವಾಗಲೇ ಜೆಡಿಎಸ್ ಪಾಳಯದಿಂದ ನಕಾರಾತ್ಮಕ ಪ್ರತಿಕ್ರಿಯೆಗಳು ಕೇಳೀ ಬರುತ್ತಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಅನಗತ್ಯ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅದು ನಿಜವೇ ಆದರೆ ಆರಂಭದಲ್ಲಿಯೇ ಜೆಡಿಎಸ್-ಕಾಂಗ್ರಸ್ ನಡುವಿನ ಮೈತ್ರಿಯಲ್ಲಿ ಭಿನ್ನತೆ ಎದುರಾಗುವ ಸಾಧ್ಯತೆ ಇದೆ.

Facebook Comments

Sri Raghav

Admin