ನಾವು ಸುಮ್ಮನೆ ಕೂರಲ್ಲ : ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

yadiyurappa
ಬೆಂಗಳೂರು,ಮೇ 21- ನಾವು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಪಕ್ಷದ ಚಟುವಟಿಕೆ ಹಾಗೂ ಸಂಘಟನೆ ಕುರಿತಂತೆ ನಿರಂತರ ಪ್ರಕ್ರಿಯೆಗಳು ನಡೆಯಲಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಚುನಾವಣೆಯಲ್ಲಿ ಸೋಲು ಉಂಟಾಗಿಲ್ಲ. ವಿಶ್ವಾಸ ಮತಯಾಚನೆಯಲ್ಲಿ ಹಿನ್ನಡೆಯಾಗಿರಬಹುದು. ಇದಕ್ಕೆ ಧೃತಿಗೆಡದೆ ಪಕ್ಷವನ್ನು ಸಮರ್ಥವಾಗಿ ಮುನ್ನೆಡೆಸುತ್ತೇನೆ ಎಂದು ತಿಳಿಸಿದರು.

ಪಕ್ಷದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ವಿಶ್ವಾಸ ಮತಯಾಚನೆಯಲ್ಲಿ ಹಿನ್ನಡೆಯಾಗಿರುವುದಕ್ಕೆ ಕಾರ್ಯಕರ್ತರು ಹತಾಶೆಗೊಳ್ಳಬಾರದು. ಬರಲಿರುವ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆ ಮತ್ತು ಲೋಕಸಭೆ ಚುನಾವಣೆ ತಯಾರಿಗೆ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ ಎಂದರು.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಜೊತೆ ಬುಧವಾರ ಸಭೆ ನಡೆಸಲಾಗುವುದು. ಯಾವ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ, ಇದಕ್ಕೆ ಕಾರಣಗಳೇನು, ಪಕ್ಷವನ್ನು ಸಂಘಟಿಸುವ ಬಗ್ಗೆ ಅಭ್ಯರ್ಥಿಗಳ ಜೊತೆ ಚರ್ಚೆ ನಡೆಸಲಿದ್ದೇನೆ ಎಂದು ಹೇಳಿದರು.

ರೈತರ ಸಾಲಮನ್ನಾದ ಬಗ್ಗೆ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನು ಇಳಕಲ್ ಸ್ವಾಮೀಜಿಗಳು ಶನಿವಾರ ನಿಧನರಾಗಿದ್ದಾರೆ. ಇಂದು ಅವರ ಅಂತಿಮ ದರ್ಶನ ಪಡೆದು ಬಳಿಕ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಸಮೀಪದ ಹುಣಸೆಮರದ ಗ್ರಾಮಕ್ಕೆ ಭೇಟಿ ನೀಡಲಿದ್ದೇನೆ. ನನಗೆ ವಿಶ್ವಾಸ ಮತಯಾಚನೆಯಲ್ಲಿ ಸೋಲುಂಟಾಗಿದ್ದರಿಂದ ಚನ್ನಬಸಪ್ಪ ಎಂಬ ಅಭಿಮಾನಿಯೊಬ್ಬರು ಹೃದಯಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಇಂದು ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದೇನೆ ಎಂದು ತಿಳಿಸಿದರು.

Facebook Comments

Sri Raghav

Admin