ಮಾಜಿ ಶಾಸಕ ವೈ.ಸಿ. ವಿಶ್ವನಾಥ್ ನಿಧನ, ಇಂದು ಅಂತ್ಯಸಂಸ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Vishwanath

ಕಡೂರು, ಮೇ 21- ಮಾಜಿ ಶಾಸಕ ಡಾ. ವೈ.ಸಿ. ವಿಶ್ವನಾಥ್(68) ಭಾನುವಾರ ಬೆಳಗ್ಗೆ ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸರ್ಕಾರಿ ವೈದ್ಯರಾಗಿ ತಾಲೂಕಿನ ಸಿಂಗಟಗೆರೆ, ಯಳ್ಳಂಬಳಸೆ, ಪಂಚನಹಳ್ಳಿ, ಹಿರೇನಲ್ಲೂರು, ಯಗಟಿ, ಬಾಸೂರಿನಲ್ಲಿ ಸೇವೆ ಸಲ್ಲಿಸಿ ನಂತರ ಕಡೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿ ಕಾರ್ಯನಿರ್ವಹಿಸಿ ಅಪಾರ ಜನರ ನೆಚ್ಚಿನ ವೈದ್ಯರಾಗಿ ಸುಮಾರು 40 ಸಾವಿರಕ್ಕೂ ಹೆಚ್ಚಿನ ಆಪರೇಷನ್ ನಡೆಸಿದ ಕೀರ್ತಿ ಡಾ.ವಿಶ್ವನಾಥ್ ರವರಿಗೆ ಸಲ್ಲುತ್ತದೆ.

ಮೃತ ದೇಹವನ್ನು ಕಡೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಒಳ ಸಭಾಂಗಣದಲ್ಲಿ ಭಾನುವಾರ ಸಂಜೆಯಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ನಂತರ ಸ್ವ-ಗ್ರಾಮ ಯಳ್ಳಂಬಳಸೆಯಲ್ಲಿ ಇಂದು ಮಧ್ಯಾಹ್ನ ಅವರ ತೋಟದಲ್ಲಿ ನಾಡಿನ ವಿವಿಧ ಮಠಾದೀಶರು, ರಾಜಕೀಯ ಧುರೀಣರು, ಸಾಹಿತಿಗಳು, ವೈದ್ಯರು ಹಾಗೂ ಅಪಾರ ಬಂಧು ಬಳಗದೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು.

ಡಾ. ವೈ.ಸಿ. ವಿಶ್ವನಾಥ್ ಅವರ ಪತ್ನಿ ಸುವರ್ಣಮ್ಮ ಈಗ 6 ತಿಂಗಳ ಹಿಂದೆ ನಿಧನರಾಗಿದ್ದರು. ಅವರಿಗೆ ಪ್ರದೀಪ್ ಮತ್ತು ಪವನ್ ಹಾಗೂ ದಿವ್ಯ ಎಂಬ ಮೂರು ಜನ ಮಕ್ಕಳನ್ನು ಅಗಲಿದ್ದಾರೆ.  1998-99 ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿ ಬಿಜೆಪಿ ಪಕ್ಷ ಸೇರಿದರು. 2001 ರಿಂದ 2018 ರವರೆವಿಗೆ ಕಡೂರು ಪಟ್ಟಣದ ನಿವೃತ್ತ ವೈದ್ಯ ಡಾ. ಉಮೇಶ್ ರಾವ್ ಜೊತೆಗೂಡಿ ಮಾರುತಿ ನರ್ಸಿಂಗ್ ಹೋಂ ತೆರೆದು ರಾಜಕೀಯದ ಜೊತೆಯಲ್ಲಿಯೇ ವೃತ್ತಿ ನಡೆಸುತ್ತಿದ್ದರು.

ನಿವೃತ್ತಿ ಪಡೆದ ನಂತರ ಬಿಜೆಪಿ ಪಕ್ಷದಿಂದ 1999ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡರು. 2008ರ ಚುನಾವಣೆಗೆ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡ ಅವರು ವೈದ್ಯ ವೃತ್ತಿಯನ್ನು ಕೈ ಬಿಟ್ಟಿರಲಿಲ್ಲ. ಬೆಳ್ಳಿಪ್ರಕಾಶ್ ವಿಜಯೋತ್ಸವದಲ್ಲಿ ಭಾಗವಹಿಸಿದ ನಂತರ ಅಸ್ವಸ್ಥರಾದ ಅವರಿಗೆ ಅವರದೇ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಡಾ. ವಿಶ್ವನಾಥ್ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದರು.

ಸಾಮಾಜಿಕ, ಸಾಹಿತ್ಯ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಅವರು ತಾಲೂಕಿನ ಜಿ. ಮಾದಾಪುರದ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ದೇವಾಲಯದ ಧರ್ಮದರ್ಶಿಗಳಾಗಿ ಸೇವೆಯಲ್ಲಿದ್ದರು, ಯಳ್ಳಂಬಳಸೆ ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದರು.  ತಾಲೂಕಿನ ಅನೇಕ ವೈದ್ಯರಿಗೆ ಗುರುವಿನ ಸ್ಥಾನದಲ್ಲಿದ್ದ ಅವರ ಅಗಲಿಕೆಗೆ ತಾಲೂಕು ಮತ್ತು ಜಿಲ್ಲೆಯ ವೈದ್ಯರು ಕಂಬನಿ ಮಿಡಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ವೈ.ಎಸ್.ವಿ ದತ್ತ, ಕಾಂಗ್ರೆಸ್ ಮುಖಂಡರಾದ ಕೆ.ಎಸ್. ಆನಂದ್, ಕಡೂರು ಶಾಸಕ ಬೆಳ್ಳಿಪ್ರಕಾಶ್, ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ. ರವಿ, ತರೀಕೆರೆ ಶಾಸಕ ಡಿ.ಎಸ್. ಸುರೇಶ್, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮು, ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್, ಕಡೂರು ಮತ್ತು ಬೀರೂರು ಪುರಸಭಾ ಅಧ್ಯಕ್ಷರಾದ ಎಂ. ಮಾದಪ್ಪ ಮತ್ತು ಸವಿತಾರಮೇಶ್ ಸಂತಾಪ ಸೂಚಿಸಿದರು.

Facebook Comments

Sri Raghav

Admin