ಮೈತ್ರಿ ಸರ್ಕಾರಕ್ಕೆ ವಿಘ್ನಗಳೆದುರಾಗದಂತೆ ದೇವರ ಮೊರೆಹೋದ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Holenarasipura--01-Kumarasw
ಬೆಂಗಳೂರು, ಮೇ 21-ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದೂ ಕೂಡ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದನ್ನು ಮುಂದುವರೆಸಿದರು. ಇಂದು ಬೆಳಗ್ಗೆ ತಮ್ಮ ಹುಟ್ಟೂರು ಹರದನಹಳ್ಳಿಯ ಶಿವನ ದೇವಾಲಯ, ಹೊಳೆನರಸೀಪುರದ ಲಕ್ಷ್ಮೀ ನರಸಿಂಹಸ್ವಾಮಿ, ಆಂಜನೇಯಸ್ವಾಮಿ ದೇವಾಲಯ, ಹಳೇ ಕೋಟೆ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ ಹಾಗೂ ಎಲಿಯೂರು ದೇವಿರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.  ದೇವಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ನಿ ಹಾಗೂ ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತಿತರರ ಗಣ್ಯರು ಜೊತೆಗಿದ್ದರು. ನಿನ್ನೆ ತಿರುಚಿಯ ಶ್ರೀರಂಗಂನ ರಂಗನಾಥ ದೇವಾಲಯಕ್ಕೆ ಎಚ್.ಡಿ.ರೇವಣ್ಣ ಅವರೊಂದಿಗೆ ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

Kymaraswamy--01

ಸಿಎಂ ಹುದ್ದೆ ನಿಭಾಯಿಸುವುದು ದೊಡ್ಡ ಸವಾಲು :
ಹಾಸನ, ಮೇ 21-ಈ ಬಾರಿ ಸಿಎಂ ಹುದ್ದೆ ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಲು ಸಂಕಲ್ಪ ತೊಟ್ಟಿದ್ದೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು. ಪತ್ನಿ ಅನಿತಾ ಜೊತೆ ಹಾಸನ ಜಿಲ್ಲೆಯ ಹೊಳೆನರಸೀಪುರಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಮಾತನಾಡಿ, ನಮ್ಮ ಮುಂದಿರುವ ಎಲ್ಲಾ ಸವಾಲಗಳನ್ನು ನಿಭಾಯಿಸಿ ಉತ್ತಮ ಆಡಳಿತ ನೀಡುವುದೇ ನಮ್ಮ ಗುರಿ ಎಂದರು.

ಎಲ್ಲರ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು , ನನ್ನ ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶ್ರೀರಾಮುಲು ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ನಾನು ಹುಟ್ಟಿ ಬೆಳೆದ ಜಿಲ್ಲೆಯ ಲಕ್ಷ್ಮಿ ನರಸಿಂಹಸ್ವಾಮಿ ದೇವರು ಹಾಗೂ ಹರದನಹಳ್ಳಿಯ ಶಿವನ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸಿದರು.  ಮಧ್ಯಾಹ್ನ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ನನಗೆ ಬೆಂಬಲ ನೀಡಿರುವ ಕಾಂಗ್ರೆಸ್ ವರಿಷ್ಠರ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ರಾಹುಲ್ ಹಾಗೂ ಸೋನಿಯಾ ಗಾಂಧಿ ಜೊತೆ ಚರ್ಚಿಸಿ ಕಾಂಗ್ರೆಸ್‍ಗೆ ಎಷ್ಟು ಸಚಿವ ಸ್ಥಾನ ನೀಡಬೇಕೆಂಬ ಬಗ್ಗೆ ಹಾಗೂ ಡಿಸಿಎಂ ಹುದ್ದೆ, ಎರಡು ಪಕ್ಷಗಳ ನಡುವೆ ಸಮನ್ವಯದ ಬಗ್ಗೆಯೂ ಚರ್ಚಿಸುವುದಾಗಿ ತಿಳಿಸಿದರು.

Facebook Comments

Sri Raghav

Admin