ಆಟೋ-ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರು ಸವಾರರ ದುರ್ಮರಣ
ಬಂಗಾರಪೇಟೆ, ಮೇ 22- ಆಟೋ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಮೃತಪಟ್ಟ ಬೈಕ್ ಸವಾರರನ್ನು ಆಂಧ್ರ ಪ್ರದೇಶ ಮೂಲದ ಮಣಿಕಂಠ (23) ಮತ್ತು ಬಂಗಾರಪೇಟೆ ತಾಲೂಕಿನ ಒಂಬತ್ತು ಗುಳಿ ಗ್ರಾಮದ ನಾಗೇಶ್ (22) ಎಂದು ಗುರುತಿಸಲಾಗಿದೆ. ಕಾರಮಂಗಲ ಗ್ರಾಮದಿಂದ ಮಿನರಲ್ ವಾಟರ್ ತೆಗೆದುಕೊಂಡು ರಾತ್ರಿ ಇವರಿಬ್ಬರು ಬೈಕ್ನಲ್ಲಿ ವಾಪಸಾಗುತ್ತಿದ್ದಾಗ ಒಂಬತ್ತುಗುಳಿ ಗ್ರಾಮದ ಕ್ರಾಸ್ನಲ್ಲಿ ಆಟೋವೊಂದು ಏಕಾಏಕಿ ತಿರುವು ಪಡೆದುಕೊಂಡು ಮುನ್ನುಗ್ಗಿದ ಪರಿಣಾಮ ಅತಿ ವೇಗವಾಗಿ ಬರುತ್ತಿದ್ದ ಬೈಕ್ ಆಟೋಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್ಐ ಭಾಸ್ಕರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎರಡೂ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರ ಶವಗಳನ್ನು ಇಂದು ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.