ಆರ್.ಆರ್.ನಗರ ನಗರ ಚುನಾವಣೆಗೆ ತಯಾರಿ, ಬಿಗಿ ಬಂದೋಬಸ್ತ್

ಈ ಸುದ್ದಿಯನ್ನು ಶೇರ್ ಮಾಡಿ

RR-Nagar

ಬೆಂಗಳೂರು, ಮೇ 22-ಒಂಬತ್ತು ಸಾವಿರಕ್ಕೂ ಹೆಚ್ಚು ನಕಲಿ ವೋಟರ್ ಐಡಿ ಪತ್ತೆಯಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇದೇ 28 ರಂದು ನಡೆಯಲಿದ್ದು, 31 ರಂದು ಮತ ಎಣಿಕೆ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಸಕಲ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರರಾವ್ ಇಂದಿಲ್ಲಿ ತಿಳಿಸಿದರು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 421 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ನಾಲ್ಕು ಕ್ಲಿಷ್ಟಕರ ಮತಗಟ್ಟೆಗಳಿವೆ. 47 ಅತಿಸೂಕ್ಷ್ಮ ಮತಗಟ್ಟೆ, 186 ಸೂಕ್ಷ್ಮ ಮತಗಟ್ಟೆ ಹಾಗೂ 184 ಸಾಮಾನ್ಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‍ನಿಂದ ತಲಾ ಒಬ್ಬ ಅಭ್ಯರ್ಥಿ, ಇತರೆ ಪಕ್ಷಗಳಿಂದ ಏಳು, ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 14 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ತಿಳಿಸಿದರು.  ಈ ಕ್ಷೇತ್ರದಲ್ಲಿ ನಾಲ್ಕು ಜನ ವೀಕ್ಷಕರನ್ನು ನೇಮಿಸಲಾಗಿದೆ. 2524 ಮತಗಟ್ಟೆ ಅಧಿಕಾರಿಗಳಿಗೆ ನಾಳೆ ಹಲಗೆ ವಡೇರಹಳ್ಳಿಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದೇ ಶಾಲೆಯಲ್ಲಿ 27 ರಂದು ಮಸ್ಟರಿಂಗ್ ಕಾರ್ಯವಿದೆ. 28 ರಂದು ಬೆಳಿಗ್ಗೆ ಮತದಾನ ನಡೆಯಲಿದ್ದು, 31 ರಂದು ಮತ ಎಣಿಕೆ ಕೂಡ ಇದೇ ಶಾಲೆಯಲ್ಲಿ ನಡೆಯಲಿದೆ ಎಂದರು. ಆರ್.ಆರ್.ನಗರ ಚುನಾವಣೆಯಲ್ಲಿ ಎಂ-3 ಮಾದರಿಯ ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಬಳಸಲಾಗುತ್ತಿದೆ. 421 ಕಂಟ್ರೋಲ್ ಯೂನಿಟ್, 421 ಬ್ಯಾಲೆಟ್ ಯೂನಿಟ್, 421 ವಿವಿ ಪ್ಯಾಟ್ ಇವೆ. ಶೇ.20ರಷ್ಟು ಹೆಚ್ಚುವರಿ ಎಂ-3 ಇವಿಎಂ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

ಸದರಿ ಕ್ಷೇತ್ರದಲ್ಲಿ ನಾಲ್ಕು ಪಿಂಕ್ ಮತಗಟ್ಟೆ ಸ್ಥಾಪಿಸಲಾಘಿದೆ. ಇವುಗಳಲ್ಲಿ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಮಾತನಾಡಿ, ಆರ್.ಆರ್.ನಗರ ಕ್ಷೇತ್ರದಲ್ಲಿ ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಏಳು ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 10 ಸಿಪಿಎಂಎಸ್ ತುಕಡಿ, 15 ಕೆಎಸ್‍ಆರ್‍ಪಿ ಸೇರಿದಂತೆ ಸ್ಥಳೀಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದರು.

ಈ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ 9 ಎಂಸಿಸಿ ಮತ್ತು ಫ್ಲೈಯಿಂಗ್ ಸ್ಕ್ವಾಡ್, 14 ಎಸ್‍ಎಸ್‍ಟಿ ತಂಡ, 45 ಸೆಕ್ಟರ್ ಮ್ಯಾಜಿಸ್ಟ್ರೇಟ್ ಅಧಿಕಾರಿಗಳ ತಂಡ, 2 ವಿಎಸ್‍ಟಿ, 1 ವಿವಿಟಿ ತಂಡ, 100 ಜನ ಮತಗಟ್ಟೆ ಸೂಕ್ಷ್ಮ ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.  ದುರ್ಬಲ, ಕ್ಲಿಷ್ಟಕರ, ಅತಿಸೂಕ್ಷ್ಮ 20 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ಅಳವಡಿಸಲಾಗುವುದು. 31 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್‍ಗಳು, ಒಟ್ಟು 74 ಬಸ್‍ಗಳು, ಎರಡು ಜೀಪ್ 2 ಟೆಂಪೋ ಟ್ರಾವೆಲರ್‍ಗಳು ಒಟ್ಟು 5 ಮಿನಿ ಬಸ್‍ಗಳನ್ನು ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.

10 ಮಂದಿ ಬಂಧನ:
ವೋಟರ್ ಐಡಿ ಪತ್ತೆ ಪ್ರಕರಣ ಸಂಬಂಧ 10 ಮಂದಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ಸುನೀಲ್‍ಕುಮಾರ್ ತಿಳಿಸಿದರು.9 ,750 ವೋಟರ್ ಐಡಿಗಳನ್ನು ಆಯಾ ಮತದಾರರಿಗೆ ಹಿಂತಿರುಗಿಸಲಾಗಿದೆ. ಅವುಗಳನ್ನು ತೋರಿಸಿ ನಿರ್ಭೀತಿಯಿಂದ ಮತ ಚಲಾಯಿಸಬಹುದು ಎಂದು ಹೇಳಿದರು. ಚುನಾವಣೆ ವೇಳೆ ಅಕ್ರಮ ಮತದಾನವಾಗದಂತೆ ಹದ್ದಿನ ಕಣ್ಣಿಡಲಾಗಿದೆ. ಡಿಸಿಪಿಗಳಾದ ಚೇತನ್‍ರಾಥೋಡ್, ರವಿ ಡಿ.ಚನ್ನಣ್ಣನವರ್ ಅವರಿಗೆ ಉಸ್ತುವಾರಿ ವಹಿಸಲಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin