ಕಣ್ಣಿನ ಬಿಳಿಚುಕ್ಕಿಯ ಬಗ್ಗೆ ಇರಲಿ ಎಚ್ಚರ..!

ಈ ಸುದ್ದಿಯನ್ನು ಶೇರ್ ಮಾಡಿ

health-11

ಬೆಂಗಳೂರು, ಮೇ 22- ನವಜಾತ ಶಿಶುವಿನಿಂದ ಹಿಡಿದು ಐದು ವರ್ಷದ ಮಕ್ಕಳ ತನಕ ಇತ್ತೀಚಿನ ವರ್ಷಗಳಲ್ಲಿ ರೆಟಿನೋ ಬ್ಲಾಸ್ಟೋಮಾ ಪ್ರಕರಣ ಹೆಚ್ಚಾಗುತ್ತಿದೆ.
ರೆಟಿನೋ ಬ್ಲಾಸ್ಟೋಮಾ ಜೀವಕ್ಕೆ ಬೆದರಿಕೆ ಒಡ್ಡುವ ಕಣ್ಣಿನ ಕ್ಯಾನ್ಸರ್ ಆಗಿದ್ದು, ನವಜಾತ ಶಿಶು ಹಾಗೂ ಸಣ್ಣ ಮಕ್ಕಳ ಕಣ್ಣಿನಲ್ಲಿ ಕಂಡುಬರುವ ಯಾವುದೇ ಅಸಹಜ ಲಕ್ಷಣ ಕುರಿತಂತೆ ಬೇಗ ತಪಾಸಣೆ ಮಾಡಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ನಗರದ ನೇತ್ರ ತಜ್ಞರು. ನಿರಂತರವಾಗಿ ಮಕ್ಕಳ ನೇತ್ರ ತಪಾಸಣೆ ಮಾಡಿಸುವುದರಿಂದ ಅಪಾಯಕಾರಿ ಕಣ್ಣಿನ ಕ್ಯಾನ್ಸರ್ ಪತ್ತೆ ಮಾಡಬಹುದು. ಚಿಕ್ಕವರಿದ್ದಾಗಲೇ ಬರುವ ಅಂಧತ್ವವನ್ನು ತಡೆಯಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಜಾಗತಿಕವಾಗಿ ಪ್ರತಿವರ್ಷ 8,000 ಹೊಸ ಪ್ರಕರಣ ವರದಿಯಾಗುತ್ತಿವೆ. ಅವುಗಳ ಪೈಕಿ ಭಾರತದಲ್ಲಿ 1,500 ಪ್ರಕರಣ ವರದಿಯಾಗುತ್ತಿವೆ, ಆರ್‍ಬಿಯನ್ನು ಬೇಗನೆ ಪತ್ತೆ ಮಾಡಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಎಂದರು. ಪ್ರಾಥಮಿಕ ಹಂತದಲ್ಲಿ ಆರ್‍ಬಿ ಪತ್ತೆ ಮಾಡುವುದು ಸುಲಭವಲ್ಲ. ಸಣ್ಣದಾಗಿ ಹೊಳೆಯುವ ಬಿಳಿಚುಕ್ಕಿ, ಮೆಳ್ಳುಗಣ್ಣು, ಕಣ್ಣು ಊದಿರುವುದು, ಸದಾ ನೀರು ಸುರಿಯುವುದು ಇದರ ಕೆಲ ಕುರುಹು. ಆರ್‍ಬಿ ಹೆಚ್ಚಾದಂತೆಲ್ಲ ಬಿಳಿ ಹೆಚ್ಚು ಕಾಣುತ್ತದೆ. ಕೆಲವೊಮ್ಮೆ ಕಾಣುವುದಿಲ್ಲ. ಇದು ಬೆಳೆದಂತೆ ಕಣ್ಣಿನಲ್ಲಿ ನೋವು ಬರುತ್ತದೆ, ಕೆಂಪಾಗುತ್ತದೆ, ಊದುತ್ತದೆ. ಈ ಹಂತದಲ್ಲಿ ಪತ್ತೆ ಮಾಡದಿದ್ದರೆ, ಚಿಕಿತ್ಸೆ ನೀಡದಿದ್ದರೆ ಕ್ಯಾನ್ಸರ್ ಕಣ್ಣಿನ ಹೊರಕ್ಕೂ ಹರಡುತ್ತದೆ. ಕ್ರಮೇಣ ಮೆದುಳಿಗೆ ಹಬ್ಬುವ ಅಪಾಯವಿದೆ ಎಂದು ರೆಟಿನೋ ಬ್ಲಾಸ್ಟೋಮ ತಜ್ಞ ಹೊರುಸ್ ಸ್ಪೆಷಾಲಿಟಿ ಐ ಕೇರ್ ನಿರ್ದೇಶಕ ಡಾ. ಫೈರೋಜ್ ಪಿ.ಮಂಜನ್‍ದಿವಿಡ ಹೇಳಿದ್ದಾರೆ. ನಾರಾಯಣ ನೇತ್ರಾಲಯ ಅಧ್ಯಕ್ಷ ಡಾ.ಕೆ. ಭುಜಂಗಶೆಟ್ಟಿ ಅವರ ಪ್ರಕಾರ, ರೆಟಿನೋಬ್ಲಾಸ್ಟೊಮ ಹೊಂದಿರುವ ಮಕ್ಕಳಿಗೆ ಪರೀಕ್ಷೆ ಹಾಗೂ ಸಮಾಲೋಚನೆ ಮಾಡುವ ಸೌಲಭ್ಯ ದೊರಕಬೇಕು. ಈಗ ದೊರಕುತ್ತಿರುವ ಚಿಕಿತ್ಸೆ ಹೊರತುಪಡಿಸಿ ಹೊಸ ಮಾದರಿ ಚಿಕಿತ್ಸೆಗೆ ಭಾರತದಲ್ಲಿ ಸಂಶೋಧನೆ ನಡೆಯಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Facebook Comments